ಮಂಗಳೂರು: ಕ್ಯಾಬಿನೆಟ್ ಕಮಿಟಿಯಲ್ಲಿ ಚರ್ಚೆಯಾಗುವ, ಗೌಪ್ಯತೆ ಕಾಪಾಡಬೇಕಾದ ವಿಚಾರ ಪತ್ರಕರ್ತ ಅರ್ನಾಬ್ ಗೋಸ್ವಾಮಿಗೆ ತಿಳಿಯುತ್ತದೆ ಎಂದಾದಲ್ಲಿ ಇದು ದೇಶದ್ರೋಹದ ಕೆಲಸವಾಗಿದೆ. ನೇರವಾಗಿ ಇದರ ಹೊಣೆಯನ್ನು ಪ್ರಧಾನಿ ಮೋದಿಯವರು ಹೊತ್ತುಕೊಂಡು ಜಂಟಿ ಸಂಸತ್ ಸಮಿತಿ ರಚಿಸಿ ಮಾಹಿತಿ ಸೋರಿಕೆ ಮಾಡಿದವರು ಯಾರೆಂದು ತನಿಖೆ ನಡೆಸಿ ಅವರನ್ನು ವಜಾಗೊಳಿಸಲಿ. ಅಲ್ಲದೇ ಅವರ ಮೇಲೆ ದೇಶದ್ರೋಹದ ಕಾನೂನಡಿ ಶಿಕ್ಷೆಯಾಗಲಿ ಎಂದು ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಥೋಡ್ ಆಗ್ರಹಿಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು, ಕ್ಯಾಬಿನೆಟ್ ಕಮಿಟಿಯಲ್ಲಿ ದೇಶದ ಪ್ರಧಾನಮಂತ್ರಿ, ಗೃಹ ಸಚಿವರು, ವಿದೇಶಾಂಗ ಸಚಿವರು, ಹಣಕಾಸು ಸಚಿವರು, ರಕ್ಷಣಾ ಸಚಿವರು ಮಾತ್ರ ಇರುತ್ತಾರೆ, ದೇಶದ ಆಂತರಿಕ ಭದ್ರತೆಗೆ ಸಂಬಂಧಿಸಿದ ಗೌಪ್ಯ ನಿರ್ಣಯವನ್ನು ಈ ತಂಡ ತೆಗೆದುಕೊಳ್ಳುತ್ತದೆ. ಹಾಗಾದಲ್ಲಿ ಕ್ಯಾಬಿನೆಟ್ ಕಮಿಟಿಯಲ್ಲಿ ಚರ್ಚೆಯಾಗುವ ವಿಚಾರ ಹೇಗೆ ಹೊರಬರುತ್ತದೆ ಎಂದು ತನಿಖೆಯಾಗಲಿ ಎಂದರು.
ರಿಪಬ್ಲಿಕ್ ಟಿವಿ ವ್ಯವಸ್ಥಾಪಕ ನಿರ್ದೇಶಕ ಅರ್ನಾಬ್ ಗೋಸ್ವಾಮಿ, ಬಾರ್ಕ್ ಮಾಜಿ ಸಿಇಒ ಪಾರ್ಥೋದಾಸ್ ಗುಪ್ತ ಅವರ ನಡುವೆ ವಾಟ್ಸ್ಆ್ಯಪ್ ಮೂಲಕ ದೇಶದ ಆಂತರಿಕ ಭದ್ರತೆಗೆ ಧಕ್ಕೆ ಉಂಟು ಮಾಡುವ ಸಂಭಾಷಣೆ ನಡೆದಿರೋದನ್ನು ಮುಂಬೈ ಹೈಕೋರ್ಟ್ ಅಡಿಷನಲ್ ಚಾರ್ಜ್ ಶೀಟ್ನಲ್ಲಿ ದಾಖಲೆಯಾಗಿದೆ. ಇದು ದೇಶದ ಜನತೆಗೆ ಆಘಾತ ಉಂಟು ಮಾಡಿದೆ. ಆದ್ದರಿಂದ ತಕ್ಷಣ ಅರ್ನಾಬ್ ಗೋಸ್ವಾಮಿ ಬಂಧನ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಹೇಳಿದರು.
ಬಾಲ್ ಕೋಟ್ ದಾಳಿಯ ಬಗ್ಗೆ ಅರ್ನಾಬ್ ಗೋಸ್ವಾಮಿಗೆ ಮೂರು ದಿನಗಳ ಮೊದಲೇ ತಿಳಿಯುತ್ತದೆ. ಈ ಬಗ್ಗೆ ಪಾರ್ಥೋದಾಸ್ ಗುಪ್ತನೊಂದಿಗೆ ಚರ್ಚೆ ಮಾಡುತ್ತಾರೆ. ಅಲ್ಲದೆ ಪುಲ್ವಾಮ ದಾಳಿಯ ಬಗ್ಗೆಯೂ, ಇದು ರಾಜಕೀಯ ಪ್ರೇರಿತ ದಾಳಿ ಇದರಿಂದ ಬಿಜೆಪಿ ಹಾಗೂ ಪ್ರಧಾನಿಗೆ ಲಾಭವಾಗಲಿದೆ ಎಂದು ಸಂದೇಶ ರವಾನಿಸುತ್ತಾರೆ. ಹಾಗಾದರೆ ಪುಲ್ವಾಮ ದಾಳಿಯ ಬಗ್ಗೆ ಮೊದಲೇ ತಿಳಿದಿತ್ತೇ?, ನಮ್ಮವರೇ ಸಂಚು ಮಾಡಿ ಕೃತ್ಯ ಎಸಗಿದ್ದಾರೆಯೇ ಎಂಬ ಸಂಶಯ ಮೂಡುತ್ತದೆ. ಇದು ಭಾರತದ ಪ್ರತಿಯೊಬ್ಬ ನಾಗರಿಕರೂ ಸಹ ತಲೆತಗ್ಗಿಸುವಂತಹ ಕೆಲಸವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೇ, ಈ ಇಬ್ಬರ ನಡುವೆ 370 ನೇ ವಿಧಿ ರದ್ದತಿ ಬಗ್ಗೆಯೂ ಮೊದಲೇ ಸಂಭಾಷಣೆ ನಡೆದಿದೆ. ಜಡ್ಜ್ ಅನ್ನು ಕೊಂಡುಕೊಳ್ಳುವ ಬಗ್ಗೆ ಮಾತನಾಡಿ ನ್ಯಾಯಾಂಗ ನಿಂದನೆಯೂ ಆಗಿದೆ. ಡಿಟಿಎಚ್ ವಿಚಾರದಲ್ಲಿ ಮಾಧ್ಯಮದವರು ಅರ್ನಾಬ್ ಗೋಸ್ವಾಮಿ ಹಾಗೂ ಝೀ ಟಿವಿ ವಿರುದ್ಧ ವಾರ್ತಾ ಮತ್ತು ಪ್ರಸಾರ ಸಚಿವ ರಾಜವರ್ಧನ್ ಸಿಂಗ್ ರಾಥೋಡ್ ಅವರಿಗೆ ದೂರು ಸಲ್ಲಿಸಿದ್ದರು. ಆದರೆ, ಅವರು ಯಾವುದೇ ನಿರ್ಣಯ ತೆಗೆದುಕೊಳ್ಳದೆ ಅದನ್ನು ಬದಿಗಿಟ್ಟು ದೇಶದ ಬೊಕ್ಕಸಕ್ಕೆ 52 ಕೋಟಿ ರೂ. ನಷ್ಟ ಮಾಡಿದ್ದಾರೆ. ಈ ಬಗ್ಗೆ ಅವರು ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಲಿ ಎಂದು ಆಗ್ರಹಿಸಿದರು.
ಅಲ್ಲದೆ ಅರ್ನಾಬ್ ಅವರು ದೇಶದ ಗೃಹ ಮಂತ್ರಿ ಅಮಿತ್ ಶಾ ಅವರಿಗೆ ಚೈನೀಸ್ ಪಾಂಡಾ, ಸಚಿವ ಪ್ರಕಾಶ್ ಜಾವಡೇಕರ್ ಅವರಿಗೆ ಅಸಮರ್ಥ ಎಂದು ಸಂಭಾಷಣೆ ಮೂಲಕ ಪಾರ್ಥೋದಾಸ್ ಗುಪ್ತನಲ್ಲಿ ಹೇಳಿದ್ದಾರೆ. ಆತನ ವಿರುದ್ಧ ಕೇಸ್ ದಾಖಲಿಸಲು ಈಗ ಇವರಿಗೆ ತಾಕತ್ ಇಲ್ಲದೇ ಏಕೆ ಮೌನ ವಹಿಸಿದ್ದಾರೆಂದು ಉತ್ತರಿಸಲಿ. ಅರ್ನಾಬ್ ಗೋಸ್ವಾಮಿಗೆ ದೇಶದ ಸೂಕ್ಷ್ಮ ವಿಚಾರ ಬಹಿರಂಗಗೊಳಿಸಿರುವ ವಿಚಾರದ ಕಾಯ್ದೆ 1923ರ ಅಡಿಯಲ್ಲಿ, ಯುಎಪಿ 1967ಯ ಅಡಿಯಲ್ಲಿ ರಾಷ್ಟ್ರೀಯ ಭದ್ರತಾ ವಿಚಾರದಲ್ಲಿ ಬಂಧಿಸಿ ವಿಚಾರಣೆ ನಡೆಸಬೇಕು ಎಂದು ಪ್ರಕಾಶ್ ರಾಥೋಡ್ ಆಗ್ರಹಿಸಿದರು.