ಮಂಗಳೂರು: ನಗರದಲ್ಲಿ ಲಾಕ್ಡೌನ್ ಮುಂದುವರೆದಿದ್ದು, ಅಗತ್ಯ ವಸ್ತುಗಳಿಗಾಗಿ ಮಾತ್ರ ಸಾರ್ವಜನಿಕರಿಗೆ ರಸ್ತೆಗಿಳಿಯಲು ಜಿಲ್ಲಾಡಳಿತ ಅವಕಾಶ ನೀಡಿದೆ. ಈ ನಡುವೆ ಕೊರೊನಾ ಸೋಂಕು ಹರಡದಂತೆ ಜಿಲ್ಲಾಡಳಿತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಇಂದು ನಗರದಾದ್ಯಂತ ಔಷಧ ಸಿಂಪಡಣೆ ಮಾಡಲಾಗುತ್ತಿದೆ.
ಬಸ್ ನಿಲ್ದಾಣ, ಜನ ಓಡಾಡುವ ಪ್ರದೇಶಗಳು, ಪುರಭವನ, ನೆಹರೂ ಮೈದಾನದ ಬದಿಗಳಲ್ಲಿ ಟ್ಯಾಂಕರ್ ಮೂಲಕ ಸ್ಪಿಂಕ್ಲರ್ ಉಪಯೋಗಿಸಿ ಔಷಧ ಸಿಂಪಡಣೆ ಮಾಡಲಾಯಿತು. ಬೆಳಗ್ಗೆ 7ರಿಂದ 12 ಗಂಟೆ ವರೆಗೆ ಸಾರ್ವಜನಿಕರಿಗೆ ಅನಗತ್ಯವಾಗಿ ರಸ್ತೆಗಿಳಿಯದಂತೆ ತಿಳಿಸಿದ್ದರೂ ಅಗತ್ಯ ವಸ್ತುಗಳ ಖರೀದಿಗೆ ವಿನಾಯಿತಿ ನೀಡಲಾಗುತ್ತಿದೆ. ಆದರೆ ಮಧ್ಯಾಹ್ನದ ಬಳಿಕ ಪೊಲೀಸರು ಸನ್ನದ್ಧರಾಗಿ ಎಲ್ಲಾ ಖಾಸಗಿ ವಾಹನಗಳ ಸಂಚಾರದ ಮೇಲೆ ನಿಗಾ ವಹಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಅನಗತ್ಯ ಸಂಚಾರ ಮಾಡುವವರ ವಾಹನಗಳನ್ನು ಜಪ್ತಿ ಮಾಡಲಾಗುತ್ತಿದೆ. ಆದರೆ ಹಾಲಿನ ವಾಹನ, ದಿನಸಿ ಸಾಮಾಗ್ರಿ ಸರಬರಾಜು ವಾಹನಗಳು, ಪಾಸ್ ಇದ್ದವರು, ಕೊರೊನಾ ವಾರಿಯರ್ಸ್ ವಾಹನಗಳಿಗೆ ವಿನಾಯಿತಿ ನೀಡಲಾಗುತ್ತಿದೆ.