ಪುತ್ತೂರು : ತಾಲೂಕಿನ ಪರ್ಲಡ್ಕದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮರುರೂಪ ಕೊಡಲಾಗ್ತಿದೆ. ಒಂದು ಕಾಲದಲ್ಲಿ ಹತ್ತೂರಿನ ಮಕ್ಕಳಿಗೆ ಶಿಕ್ಷಣ ಕೇಂದ್ರವಾಗಿದ್ದ ಈ ಶಾಲೆ ಕಾಲಕ್ರಮೇಣ ಇಂಗ್ಲಿಷ್ ಶಿಕ್ಷಣದ ಪ್ರಭಾವದಿಂದ ಮುಚ್ಚುವ ಹಂತಕ್ಕೆ ತಲುಪಿತ್ತು. ಆದರೀಗ ಸ್ಥಳೀಯ ಶಿಕ್ಷಣ ಪ್ರೇಮಿಗಳಿಂದಾಗಿ ಇದೇ ಶಾಲೆ ಹೊಸ ಕಳೆ ಪಡೆದುಕೊಳ್ಳುತ್ತಿದೆ.
ಎರಡು ತಿಂಗಳ ಹಿಂದೆಯಷ್ಟೇ ತಾಲೂಕಿನ ಕೊಂಬೆಟ್ಟುವಿನ 106 ವರ್ಷಗಳಷ್ಟು ಹಳೆಯ ಐತಿಹಾಸಿಕ ಬೋರ್ಡ್ ಹೈಸ್ಕೂಲ್ ಕಟ್ಟಡವನ್ನು ಶಿಕ್ಷಣ ಪ್ರೇಮಿಗಳು ಸೇರಿ ದೇಣಿಗೆ ಸಂಗ್ರಹಿಸಿ ದುರಸ್ಥಿಗೊಳಿಸಿದ್ದರು. ಅದೇ ಮಾದರಿ ಇದೀಗ ಪರ್ಲಡ್ಕದ ಶಾಲಾ ಕಟ್ಟಡಕ್ಕೆ ನವೀಕರಣ ಭಾಗ್ಯ ಒದಗಿ ಬಂದಿದೆ.
1956ರಲ್ಲಿ ಸ್ಥಾಪನೆಯಾದ ಪರ್ಲಡ್ಕ ಸರ್ಕಾರಿ ಶಾಲೆ, ಕೆಲಕಾಲ ಸಣ್ಣ ಕಟ್ಟಡವೊಂದರಲ್ಲಿತ್ತು. ಬಳಿಕ ಶಾಲೆಗೆ ಸುಂದರ ಕಟ್ಟಡವನ್ನು ಸರ್ಕಾರ ಒದಗಿಸಿತ್ತು. ಆ ಕಟ್ಟಡ ಸರಿಯಾದ ನಿರ್ವಹಣೆಯಿಲ್ಲದೆ, ಇತ್ತೀಚಿಗೆ ಶಿಥಿಲಾವಸ್ಥೆಗೆ ತಲುಪಿತ್ತು. ಶಾಲಾ ಕಟ್ಟಡ ಕುಸಿಯುವ ಹಂತಕ್ಕೆ ತಲುಪಿತ್ತು.
ಆರಂಭದ ದಿನಗಳಲ್ಲಿ ಮಕ್ಕಳಿಂದ ತುಂಬಿ ತುಳುಕುತ್ತಿದ್ದ ಈ ಶಾಲೆ, ಇದೀಗ ಮಕ್ಕಳ ಕೊರತೆ ಎದುರಿಸುತ್ತಿದೆ. ಇದಕ್ಕೆ ಮುಖ್ಯ ಕಾರಣ ಶಾಲೆಯ ಕಟ್ಟಡ ಮತ್ತು ಸುತ್ತಮುತ್ತ ಆರಂಭಗೊಂಡಿರುವ ಆಂಗ್ಲ ಮಾಧ್ಯಮ ಶಾಲೆಗಳು. ಹೀಗಾಗಿ, ಶಾಲಾ ಕಟ್ಟಡವನ್ನು ದುರಸ್ಥಿ ಮಾಡಲು ಈ ಶಾಲೆಯಲ್ಲಿ ಕಲಿತ ಹಳೆಯ ವಿದ್ಯಾರ್ಥಿಗಳು ಮುಂದಾಗಿದ್ದಾರೆ.
ಈ ಹಿಂದೆ ಶಾಲಾ ಕಟ್ಟಡ ದುರಸ್ಥಿ ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಈ ಭಾಗದ ಕೌನ್ಸಿಲರ್ ಮತ್ತು ಪ್ರಸ್ತುತ ನಗರಸಭೆಯ ಉಪಾಧ್ಯಕ್ಷೆ ವಿದ್ಯಾ ಗೌರಿ ಕೂಡ ಶಾಲಾ ಕಟ್ಟಡವನ್ನು ದುರಸ್ಥಿಗೆ ಮುಂದಾಗಿದ್ದರು. ಇವೆಲ್ಲದರ ಫಲವಾಗಿ ಇದೀಗ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿ ದುರಸ್ಥಿ ಕಾರ್ಯಕ್ಕೆ ಮಾಡಲಾಗ್ತಿದೆ.
ಜನವರಿ 26ರಂದು ಎಸ್‌ಡಿಎಂಸಿ ಸಭೆ ನಡೆಸಿ ಕಟ್ಟಡದ ಕಾಯಕಲ್ಪಕ್ಕೆ ಯೋಜನೆ ರೂಪಿಸಲಾಯಿತು. ಜನವರಿ 31ರಂದು ಹಿರಿಯ ವಿದ್ಯಾರ್ಥಿಗಳ ಮಿಲನ್ ಕಾರ್ಯಕ್ರಮ ನಡೆಸಲಾಯಿತು. ಸಭೆಯಲ್ಲಿ ಪ್ರಸನ್ನ ಎನ್ ಭಟ್ ಅಧ್ಯಕ್ಷತೆಯಲ್ಲಿ ಹಿರಿಯ ವಿದ್ಯಾರ್ಥಿಗಳ ಸಂಘ ರಚಿಸಲಾಯಿತು.
ಕಟ್ಟಡ ದುರಸ್ಥಿಗೆಂದು ಶಿಕ್ಷಣ ಇಲಾಖೆಯ ಅನುಮತಿ ಪಡೆದು, ವಿದ್ಯಾ ಗೌರಿ ಅಧ್ಯಕ್ಷತೆಯಲ್ಲಿ ಪರ್ಲಡ್ಕ ಶಾಲಾ ಕಟ್ಟಡ ಕಾಮಗಾರಿ ಸಮಿತಿ ರಚಿಸಿ, ಪ್ರತ್ಯೇಕ ಬ್ಯಾಂಕ್ ಖಾತೆ ತೆರೆಯಲಾಯಿತು. ಸಾಮಾಜಿಕ ಮುಖಂಡ ಚನಿಲ ತಿಮ್ಮಪ್ಪ ಶೆಟ್ಟಿ ಅವರನ್ನು ಸಮಿತಿಯ ಗೌರವಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.
ಸಮಿತಿ ರಚನೆ ಬಳಿಕ ಎಲ್ಲರೂ ಸೇರಿ ದೇಣಿಗೆ ಸಂಗ್ರಹಿಸಲು ಮುಂದಾದರು. ಹಲವಾರು ಶಿಕ್ಷಣ ಪ್ರೇಮಿಗಳು ಶಾಲಾ ಕಟ್ಟಡದ ದುರಸ್ಥಿ ಕಾರ್ಯಕ್ಕೆ ದೇಣಿಗೆ ನೀಡಿದ್ದಾರೆ. ಮಾರ್ಚ್ 8ರಂದು ಕಟ್ಟಡದ ಮೇಲ್ಛಾವಣಿ ದುರಸ್ಥಿ ಕಾರ್ಯ ಆರಂಭಗೊಂಡಿದೆ. ಏಪ್ರಿಲ್ 8ರಂದು ಮುಗಿಸುವ ಗುರಿ ಇಟ್ಟುಕೊಳ್ಳಲಾಗಿದೆ. ನಂತರ ಮುಂದಿನ ಯೋಜನೆಗಳು ಆರಂಭಗೊಳ್ಳಲಿವೆ.
11 ಲಕ್ಷ ರೂ.ಗಳ ಯೋಜನೆ : ಆರಂಭಿಕ ಹಂತದಲ್ಲಿ ಶಾಲೆಯ ಮೇಲ್ಛಾವಣಿ ದುರಸ್ಥಿ ನಡೆಸಲಾಗ್ತಿದೆ. ಹಳೆಯ ಪಕ್ಕಾಸುಗಳನ್ನು ತೆರವು ಮಾಡಿ, ಕಬ್ಬಿಣದ ರಾಡ್ ಜೋಡಿಸಿ ಹೆಂಚು ಹಾಕಲಾಗ್ತಿದೆ. ನಂತರ ಕಟ್ಟಡಕ್ಕೆ ಪೇಂಟ್, ಹೊಸ ಕಿಟಕಿ, ಬಾಗಿಲು ಅಳವಡಿಕೆ, ಪೀಠೋಪಕರಣಗಳ ಅಳವಡಿಕೆ, ಶೌಚಾಲಯ ದುರಸ್ಥಿ ಇತ್ಯಾದಿ ಕಾರ್ಯಗಳನ್ನು ಮಾಡಲಾಗುತ್ತದೆ. ಶಾಲಾ ಕಟ್ಟಡದ ದುರಸ್ಥಿಗೆ ಸುಮಾರು 11 ಲಕ್ಷ ರೂ.ಗಳ ಯೋಜನೆ ಹಾಕಿಕೊಂಡಿರುವುದಾಗಿ ತಿಳಿದು ಬಂದಿದೆ.
ಹಿರಿಯ ವಿದ್ಯಾರ್ಥಿಗಳ ಶೋಧ : ನಾನು 1967 ರಿಂದ 70ರವರೆಗೆ ಇಲ್ಲಿನ ವಿದ್ಯಾರ್ಥಿಯಾಗಿದ್ದೆ. ಒಂದು ಸಮಯದಲ್ಲಿ 400 ವಿದ್ಯಾರ್ಥಿಗಳಿದ್ದ ಶಾಲೆಯಲ್ಲಿ ಈಗ 54 ಮಕ್ಕಳಿದ್ದಾರೆ. ಶಿಕ್ಷಕರ ಕೊರತೆಯೂ ಇದೆ. ಇದು 1972ರಲ್ಲಿ ಕಟ್ಟಿದ ಕಟ್ಟಡ. ಇದು ಶಿಥಿಲಾವಸ್ಥೆಗೆ ತಲುಪಿದ ಕಾರಣ ಹಿರಿಯ ವಿದ್ಯಾರ್ಥಿಗಳನ್ನು ಸೇರಿಸಿ ದುರಸ್ಥಿ ಮಾಡಿದ್ದೇವೆ.
ಈಗಾಗಲೇ 250 ಹಿರಿಯ ವಿದ್ಯಾರ್ಥಿಗಳು ಸಂಪರ್ಕಕ್ಕೆ ಸಿಕ್ಕಿದ್ದಾರೆ. ಇನ್ನಷ್ಟು ಜನರನ್ನು ಸಂಪರ್ಕಿಸಲಾಗುವುದು ಎಂದು ಪರ್ಲಡ್ಕ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಸನ್ನ ಎನ್ ಭಟ್ ತಿಳಿಸಿದ್ದಾರೆ. ಸ್ಥಳೀಯ ಕೌನ್ಸಿಲರ್ ಆಗಿದ್ದು ಶಿಕ್ಷಕರು ಮತ್ತು ಶಿಕ್ಷಣ ಪ್ರೇಮಿಗಳು ತೋರಿಸಿದ ಪ್ರೀತಿಗೆ ಮಣಿದು, ಈ ಶಾಲೆಯ ಮೇಲಿನ ಅಭಿಮಾನದಿಂದ ದುರಸ್ಥಿ ಅಭಿಯಾನಕ್ಕೆ ಇಳಿದಿದ್ದೇನೆ.
ಎಲ್ಲರೂ ಉತ್ತಮ ಸಹಕಾರ ನೀಡುತ್ತಿದ್ದಾರೆ. ಸರ್ಕಾರಿ ಶಾಲೆಯ ಸಂರಕ್ಷಣೆಯಲ್ಲಿ ಕೈಜೋಡಿಸುತ್ತಿರುವುದು ನನಗೆ ಖುಷಿ ಕೊಟ್ಟಿದೆ ಎಂದು ನಗರಸಭೆ ಉಪಾಧ್ಯಕ್ಷೆ ಪರ್ಲಡ್ಕ ಶಾಲಾ ಕಟ್ಟಡ ಕಾಮಗಾರಿ ಸಮಿತಿ ಅಧ್ಯಕ್ಷೆ ವಿದ್ಯಾಗೌರಿ ಹೇಳಿದ್ದಾರೆ.