ಮಂಗಳೂರು : ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ಪೂಜಿಸಲಾಗುವ ಶ್ರೀರಾಮನ ಮೂರ್ತಿಯನ್ನು ಜನವರಿ 17 ರಂದು ಅಂತಿಮಗೊಳಿಸಲಾಗುವುದು ಎಂದು ಶ್ರೀರಾಮ ಮಂದಿರ ನಿರ್ಮಾಣ ಟ್ರಸ್ಟ್ ಸದಸ್ಯ ಪೇಜಾವರ ಶ್ರೀ ವಿಶ್ವಪ್ರಸನ್ನ ಸ್ವಾಮೀಜಿ ಹೇಳಿದ್ದಾರೆ.
ಅವರು ಇಂದು ಕೇರಳ ಕರ್ನಾಟಕ ಗಡಿಯಲ್ಲಿರುವ ಕಣ್ವತೀರ್ಥ ಮಠದಲ್ಲಿ ಪೂಜೆ ಸಲ್ಲಿಸಿ, ಸಮುದ್ರ ಪೂಜೆ ಮಾಡಿದ ಬಳಿಕ ಮಾತನಾಡಿದರು. ಶ್ರೀ ರಾಮ ಮಂದಿರದಲ್ಲಿ ಪೂಜೆ ಸಲ್ಲಿಸಲು ಮೂರು ಮೂರ್ತಿಗಳು ಸಿದ್ದವಾಗಿವೆ. ಅವುಗಳಲ್ಲಿ ಯಾವ ಮೂರ್ತಿ ಪೂಜಿಸಲಾಗುವುದು ಎಂಬುದನ್ನು ಜನವರಿ 17 ರಂದು ಅಂತಿಮಗೊಳಿಸಲಾಗುವುದು ಎಂದರು.
ಕಣ್ವತೀರ್ಥದಲ್ಲಿ ಸಮುದ್ರಪೂಜೆ ನಡೆಸಿದ ಪೇಜಾವರ ಶ್ರೀಗಳು: ಉಡುಪಿ ಅಷ್ಟಮಠಗಳ ಮೂಲಮಠವಾದ ಮಂಜೇಶ್ವರದ ಕಣ್ವತೀರ್ಥ ಮಠದಲ್ಲಿ ಇಂದು ಪೇಜಾವರ ಶ್ರೀಗಳು ತೀರ್ಥಸ್ನಾನ ಮಾಡಿ ಸಮುದ್ರ ಪೂಜೆ ನಡೆಸಿದರು. ಅಯೋಧ್ಯೆಯ ರಾಮಮಂದಿರದಲ್ಲಿ ರಾಮಲಲ್ಲಾನ ಪ್ರಾಣಪ್ರತಿಷ್ಠೆಗೆ ದಿನಗಣನೆ ನಡೆಯುತ್ತಿದೆ. ಈ ವರ್ಷಕ್ಕೆ ಪೇಜಾವರ ಯತಿಗಳಿಗೆ ಅರವತ್ತು ವರ್ಷಗಳು ಪೂರ್ತಿಯಾಗಿದೆ. ಜೊತೆಗೆ ಕಣ್ವತೀರ್ಥ ಮಠವು ಪುನರುಜ್ಜೀವನಗೊಂಡು ಸುತ್ತುಪೌಳಿ ಕಾರ್ಯ ಸಂಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ ಕಣ್ವತೀರ್ಥ ಮಠದಲ್ಲಿ ಸೀತಾಲಕ್ಷ್ಮಣ ಸಮೇತ ಶ್ರೀರಾಮನಿಗೆ ಆರತಿ ಬೆಳಗಿ ಭೂಪುರ ಅರ್ಪಣೆ ಮಾಡಿದರು.
ಬಳಿಕ ಕಣ್ವತೀರ್ಥ ಮಠದ ಕಲ್ಯಾಣಿಯಲ್ಲಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮಿಗಳು ತೀರ್ಥಸ್ನಾನ ಮಾಡಿದರು. ನಂತರ ಭಕ್ತಾದಿಗಳೊಂದಿಗೆ ಸಮುದ್ರತೀರಕ್ಕೆ ತೆರಳಿ ಸಮುದ್ರ ಪೂಜೆ ನೆರವೇರಿಸಿದರು.
ಅಶ್ವತ್ಥ ಎಲೆಗಳು ಅಲುಗಾಡುತ್ತಿಲ್ಲ: ಕಣ್ವ ಮಹರ್ಷಿಗಳು ತಪಸ್ಸು ಮಾಡಿರುವ ಪುರಾಣ ಪ್ರಸಿದ್ಧವಾದ ಕಣ್ವತೀರ್ಥ ಮಠದಲ್ಲಿಯೇ ಮಧ್ವಾಚಾರ್ಯರು ಉಡುಪಿಯ ಅಷ್ಟಮಠಗಳಿಗೆ ದ್ವಂದ್ವ ಮಠಗಳ ಕಲ್ಪನೆಯನ್ನು ಅನುಷ್ಠಾನಗೊಳಿಸಿದರು. ಹಿಂದೆ ವಿಜಯಧ್ವಜ ತೀರ್ಥರು ಇಲ್ಲಿ ಭಾಗವತಕ್ಕೆ ಭಾಷ್ಯ ಬರೆಯುತ್ತಿರುವಾಗ ಅಲ್ಲಿದ್ದ ಅಶ್ವತ್ಥ ಮರದ ಎಲೆಗಳು ಗಾಳಿಗೆ ಪಟಪಟನೆ ಹಾರಾಡಿ ಸದ್ದು ಮಾಡಿತ್ತಂತೆ. ಇದರಿಂದ ಅವರಿಗೆ ತೊಂದರೆಯಾಗಿ ಶಾಂತನಾಗುವ ಎಂದು ಕೈಯೆತ್ತಿ ಅಶ್ವತ್ಥ ವೃಕ್ಷವನ್ನು ಸ್ತಂಭಿಸಿದ್ದರಂತೆ. ಆದ್ದರಿಂದ ಈಗಲೂ ಗಾಳಿ ಬಂದರೂ ಇಲ್ಲಿನ ಅಶ್ವತ್ಥ ಎಲೆಗಳು ಅಲುಗಾಡುತ್ತಿಲ್ಲವಂತೆ. ಅಲ್ಲದೇ ಇಲ್ಲಿನ ಸಮುದ್ರವೂ ಪ್ರಶಾಂತವಾಗಿ ಅಲೆಗಳ ಆರ್ಭಟವನ್ನು ಹೊಂದಿಲ್ಲ.
ರಾಮಮಂದಿರದಲ್ಲಿ ಸೇವಾ ಪಟ್ಟಿ ಇರುವುದಿಲ್ಲ: ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಸೇವೆ ನೀಡಲು ಭಕ್ತರಿಗಾಗಿ ಯಾವುದೇ ಪಟ್ಟಿ ಇರುವುದಿಲ್ಲ. ಕಾಣಿಕೆ ನೀಡಲು ಡಬ್ಬಿ ಇರುತ್ತದೆ. ಬಡಜನರಿಗೆ ಮನೆ ಕಟ್ಟಿ ಕೊಡುವುದೇ ಶ್ರೀರಾಮ ದೇವರಿಗೆ ಮಾಡುವ ಸೇವೆ ಎಂದು ಮಂದಿರ ನಿರ್ಮಾಣ ಟ್ರಸ್ಟ್‌ನ ಸದಸ್ಯ ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ (ಡಿಸೆಂಬರ್ -29-23) ತಿಳಿಸಿದ್ದರು.
ಮಂಗಳೂರಿನಲ್ಲಿ ಅಂದು ಮಾತನಾಡಿದ್ದ ಅವರು, "ರಾಮ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಜನವರಿ 18, 19, 20ರಂದು ಧಾರ್ಮಿಕ ವಿಧಿವಿಧಾನ ನಡೆಯುತ್ತದೆ. ಜ.21ಕ್ಕೆ ಪ್ರಾಣ ಪ್ರತಿಷ್ಠೆಗೆ ಬೇಕಾದ ಪೂರ್ವ ತಯಾರಿ ನಡೆಯುತ್ತದೆ. ಜ.22ರಂದು ಪ್ರಾಣ ಪ್ರತಿಷ್ಠೆ, ಪ್ರಧಾನಮಂತ್ರಿಗಳಿಂದ ಲೋಕಾರ್ಪಣೆ ನಡೆಯಲಿದೆ. ಮಂದಿರದಲ್ಲಿ ಅಲ್ಲಿನ ರಾಮನಂದ ಸಂಪ್ರದಾಯದಂತೆ ಪೂಜೆ ನಡೆಯುತ್ತಿದೆ. ಅದು ಮುಂದುವರಿದು ವೇದೋಕ್ತ, ಶಾಸ್ತ್ರೋಕ್ತವಾದ ಪೂಜೆಗಳು ನಡೆಯುತ್ತದೆ" ಎಂದಿದ್ದರು.
ಇದನ್ನೂ ಓದಿ: ರಾಮಮಂದಿರದಲ್ಲಿ ಸೇವಾ ಪಟ್ಟಿ ಇರುವುದಿಲ್ಲ, ಹುಂಡಿ ಇರುತ್ತದೆ: ಪೇಜಾವರ ಶ್ರೀ