ಉಳ್ಳಾಲ(ದಕ್ಷಿಣ ಕನ್ನಡ): ಪಾದಚಾರಿಗೆ ಲಾರಿ ಡಿಕ್ಕಿಯಾಗಿ ಅವರು ಸಾವನ್ನಪ್ಪಿರುವ ಘಟನೆ ನಗರದಲ್ಲಿ ನಡೆದಿದೆ. ಮುಳ್ಳೇರಿಯದ ಆದೂರು ನಿವಾಸಿ ವಸಂತ್ ಕುಮಾರ್ ರೈ (55) ಸಾವನ್ನಪ್ಪಿದವರು. ತಲಪಾಡಿ ಟೋಲ್ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿ 66 ದಾಟುವಾಗ ಕೇರಳದ ಕಡೆಯಿಂದ ಅತಿವೇಗದಿಂದ ಬಂದ ಕಲ್ಲು ಲೋಡ್ ತುಂಬಿದ್ದ ಲಾರಿ ಅವರಿಗೆ ಗುದ್ದಿತ್ತು.
ತಲೆಗೆ ಗಂಭೀರವಾಗಿ ಗಾಯವಾಗಿದ್ದು ಟೋಲ್ ಸಿಬ್ಬಂದಿ ತಮ್ಮದೇ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲು ಕರೆದೊಯ್ಯುತ್ತಿದ್ದಾಗ ದಾರಿಮಧ್ಯೆ ಸಾವನ್ನಪ್ಪಿದ್ದಾರೆ. ಮಂಗಳೂರು ಸಂಚಾರಿ ಠಾಣಾ ಪೊಲೀಸರು ಲಾರಿಯನ್ನು ವಶಕ್ಕೆ ಪಡೆದುಕೊಂಡು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ವಸಂತ್ ರೈ ಅವರು ಕಳೆದ 10 ವರ್ಷಗಳಿಂದ ಕಾಸರಗೋಡಿನ ಕೆಎಸ್‌ಆರ್‌ಟಿಸಿ ಡಿಪೋದಲ್ಲಿ ತಾತ್ಕಾಲಿಕ ನೆಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ತಿಂಗಳೊಳಗೆ ಮೂವರು ಸಹೋದರರ ದುರ್ಮರಣ: ಮುಂಬೈನಲ್ಲಿದ್ದ ಸಹೋದರ ಸದಾನಂದ ರೈ ಅವರು ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ತಿಂಗಳ ಹಿಂದಷ್ಟೇ ಸಾವನ್ನಪ್ಪಿದ್ದರು. ಅವರ ಮಕ್ಕಳು ಸೋಮವಾರ ರಾತ್ರಿ ರೈಲಿನಲ್ಲಿ ವಾಪಸ್ ಮುಂಬೈಗೆ ಪ್ರಯಾಣಿಸುವ ಹಿನ್ನೆಲೆಯಲ್ಲಿ ಅವರನ್ನು ಭೇಟಿಯಾಗುವ ಸಲುವಾಗಿ ವಸಂತ್ ರೈ ಕೋಟೆಕಾರಿಗೆ ತೆರಳುತ್ತಿದ್ದರು. ಇನ್ನೋರ್ವ ಸಹೋದರ ಚಂದ್ರಹಾಸ್ ರೈ 15 ದಿನಗಳ ಅಂತರದಲ್ಲಿ ಕ್ಯಾನ್ಸರ್ ರೋಗದಿಂದ ಮೃತಪಟ್ಟಿದ್ದರು. ಇದೀಗ ಅವರ ಸಾವಿನ 17 ದಿನಗಳ ಅಂತರದಲ್ಲಿ ವಸಂತ್ ಕುಮಾರ್ ರೈ ಸಾವನ್ನಪ್ಪಿದ್ದು, ತಿಂಗಳ ಅಂತರದಲ್ಲಿ ಒಂದೇ ಕುಟುಂಬದ ಮೂವರು ಸಾವಿಗೀಡಾಗಿದ್ದಾರೆ.
ಇದನ್ನೂ ಓದಿ: ಬಳ್ಳಾರಿ: ಲಾರಿ ಅಪಘಾತದಲ್ಲಿ ಗಾಯಗೊಂಡ ಕ್ಲೀನರ್ ಸಾವು, ಕಣ್ಣುಗಳ ದಾನ