ಮಂಗಳೂರು (ದ.ಕ): ಮಂಗಳೂರಿನ ಪಣಂಬೂರು ಬೀಚ್ ದೇಶ-ವಿದೇಶಗಳಿಂದ ಪ್ರವಾಸಿಗರನ್ನು ಆಕರ್ಷಿಸುವ ತಾಣ. ಈ ಮನಮೋಹಕ ಬೀಚ್ ಈಗ ಪ್ರವಾಸಿಗರ ನಿರ್ಲಕ್ಷ್ಯದಿಂದ ಡಂಪಿಂಗ್ ಯಾರ್ಡ್ನಂತೆ ಬದಲಾಗಿದೆ. ಹೌದು, ಸಮುದ್ರಕ್ಕೆಸೆದ ಕಸ ದಡದಲ್ಲಿ ಬಂದು ಸೇರಿದ್ದು, ಇಡೀ ಸಮುದ್ರ ತೀರದ ತುಂಬ ಕಸದ ರಾಶಿ ತುಂಬಿದೆ.
ಪಣಂಬೂರು ಸಮುದ್ರ ತೀರದಲ್ಲಿ ಕಳೆದ ಮೂರು ದಿನಗಳಿಂದ ಎಲ್ಲೆಂದರಲ್ಲಿ ಬಿದ್ದಿರುವ ಕಸದ ರಾಶಿ ಬೀಚ್ನ ಸೌಂದರ್ಯಕ್ಕೆ ಧಕ್ಕೆ ತಂದಿದೆ. ಸಮುದ್ರಕ್ಕೆ ಪ್ರವಾಸಿಗರೇ ಎಸೆದ ಕಸ ಈಗ ದೊಡ್ಡ ತ್ಯಾಜ್ಯ ರಾಶಿಯಾಗಿ ದಡಸೇರಿದೆ.
ಪ್ಲಾಸ್ಟಿಕ್ ಬಾಟಲಿ, ಮಕ್ಕಳ ಆಟಿಕೆ, ತಿಂಡಿ ತಿನಿಸಿನ ಪ್ಲಾಸ್ಟಿಕ್, ಬಟ್ಟೆಗಳು ಸೇರಿ ಇತರೆ ವಸ್ತುಗಳೀಗ ದಡದಲ್ಲಿ ರಾಶಿ ರಾಶಿಯಾಗಿ ಬಿದ್ದಿದೆ. ಪ್ರತಿ ವರ್ಷವು ಈ ರೀತಿಯ ಕಸದ ರಾಶಿ ಸಮುದ್ರದಿಂದ ಹೊರಬರುತ್ತಿತ್ತು. ಹಾಗೆಯೆ ಅದನ್ನು ತಕ್ಷಣವೇ ಸ್ವಚ್ಛಗೊಳಿಸಲಾಗುತ್ತಿತ್ತು. ಕಸಗಳನ್ನ ಪಣಂಬೂರಿನಲ್ಲಿದ್ದ ಬೀಚ್ ಅಭಿವೃದ್ಧಿ ಸಮಿತಿಯಿಂದಲೇ ಸ್ವಚ್ಚಗೊಳಿಸಲಾಗುತ್ತಿತ್ತು. ಆದರೆ ಇದೀಗ ಪಣಂಬೂರು ಬೀಚ್ ಅಭಿವೃದ್ಧಿ ಸಮಿತಿಯೊಂದಿಗೆ ಒಪ್ಪಂದ ಕೊನೆಗೊಂಡಿರುವುದರಿಂದ ಬೀಚ್ ಅಭಿವೃದ್ಧಿ ಸಮಿತಿಯವರು ಇಲ್ಲಿ ಕಾರ್ಯನಿರ್ವಹಿಸುತ್ತಿಲ್ಲ.
ಪರಿಣಾಮ ಕಳೆದ ಮೂರು ದಿನಗಳಿಂದ ಬೀಚ್ ತುಂಬಾ ಕಸದ ರಾಶಿ ತುಂಬಿಕೊಂಡಿದೆ. ಇದೀಗ ಮಂಗಳೂರಿನ ಪೌರ ಕಾರ್ಮಿಕರು ಕಸ ತೆರವಿಗೆ ಮುಂದಾಗಿದ್ದಾರೆ. ಸಮುದ್ರಕ್ಕೆ ವಿಹಾರಕ್ಕೆ ಬರುವ ಪ್ರವಾಸಿಗರು ತಾವು ಮೋಜು ಮಾಡುವ ಜೊತೆಗೆ ಸಮುದ್ರವನ್ನು ಸ್ವಚ್ಛವಾಗಿಡುವ ಜವಾಬ್ದಾರಿ ಹೊರಬೇಕಿದೆ. ಜೊತೆಗೆ ಸ್ಥಳೀಯಾಡಳಿತ ಸಹ ಪ್ರವಾಸಿಗರಿಗೆ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕಿದೆ.
ಇದನ್ನೂ ಓದಿ: ಮೈಸೂರು ಚಿನ್ನದ ಅಂಗಡಿಯಲ್ಲಿ ದರೋಡೆ ಯತ್ನ ಪ್ರಕರಣ.. ಸಿಸಿಟಿವಿಯಲ್ಲಿ ಕಳ್ಳರ ಚಾಣಾಕ್ಷತನ ಸೆರೆ..