ಸುಬ್ರಹ್ಮಣ್ಯ(ದಕ್ಷಿಣ ಕನ್ನಡ): ವಿಶ್ವ ಪ್ರಸಿದ್ಧ ನಾಗಕ್ಷೇತ್ರ ಕಡಬ ತಾಲೂಕಿನ ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಷಷ್ಠಿ ಸಂಭ್ರಮ ಹೆಚ್ಚುತ್ತಿದೆ. ಈ ನಡುವೆ ಚಂಪಾಷಷ್ಠಿಯ ಸಂದರ್ಭದಲ್ಲಿ ಅನ್ಯಮತೀಯರಿಗೆ ವ್ಯಾಪಾರ, ವ್ಯವಹಾರಗಳನ್ನು ನಿಷೇಧಿಸುವಂತೆ ಕೋರಿ ಹಿಂದೂ ಜಾಗರಣ ವೇದಿಕೆ ಸುಬ್ರಹ್ಮಣ್ಯ ಘಟಕದ ವತಿಯಿಂದ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ.
ಅಲ್ಲದೆ, ಕುಕ್ಕೆಯಲ್ಲಿ ಅನ್ಯಮತೀಯರ ವ್ಯಾಪಾರ ವಹಿವಾಟುಗಳನ್ನು ನಿಷೇಧಿಸಲಾಗಿದೆ ಎಂಬ ಬ್ಯಾನರ್ ಹಾಕಲಾಗಿದೆ. ಹಿಂದೂ ಜಾಗರಣಾ ವೇದಿಕೆ ಸುಬ್ರಹ್ಮಣ್ಯ ಘಟಕ ಹೆಸರಿನಲ್ಲಿ ಕುಮಾರಧಾರ ಸ್ನಾನಘಟ್ಟದ ಸಮೀಪ ಇರುವ ಪ್ರವೇಶ ದ್ವಾರದ ಬಳಿ ಈ ಬ್ಯಾನರ್ ಅಳವಡಿಸಲಾಗಿದೆ. ಅನ್ಯಮತೀಯರಿಗೆ ವ್ಯಾಪಾರ ವ್ಯವಹಾರಗಳನ್ನು ನಿಷೇಧಕ್ಕೆ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಗೆ ಮನವಿಯಲ್ಲಿ ಆಗ್ರಹಿಸಲಾಗಿದೆ. ಮನವಿ ಸಲ್ಲಿಸುವಾಗ ಹಿಂದೂ ಜಾಗರಣ ವೇದಿಕೆ ಸುಳ್ಯ ತಾಲೂಕು ಸಹಸಂಚಾಲಕ್ ಜೀವನ್ ಕುಕ್ಕೆ, ಕುಕ್ಕೆ ಸುಬ್ರಹ್ಮಣ್ಯ ಘಟಕದ ಉಪಾಧ್ಯಕ್ಷ ಸುಬ್ಬಪ್ಪ ಕೆ., ಕಾರ್ಯದರ್ಶಿ ವಿನೋದ್ ಕುಮಾರ್ ಕುಲ್ಕುಂದ ಮುಂತಾದವರು ಇದ್ದರು.
ಬ್ಯಾನರ್ ಅಳವಡಿಕೆ ಬಗ್ಗೆ 'ಈಟಿವಿ ಭಾರತ'ಕ್ಕೆ ಪ್ರತಿಕ್ರಿಯಿಸಿದ ಕುಕ್ಕೆ ಸುಬ್ರಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಡಾ. ನಿಂಗಯ್ಯ, ಬ್ಯಾನರ್ ಅಳವಡಿಸಿರುವ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ ಎಂದಿದ್ದಾರೆ. ನಾವು ದೇಗುಲದ ವತಿಯಿಂದ ಇಂತಹ ಯಾವುದೇ ಬ್ಯಾನರ್ಗಳನ್ನು ಹಾಕಿಲ್ಲ. ಇಲ್ಲಿ ಇದೀಗ ಬ್ಯಾನರ್ ಹಾಕಿರುವುದಕ್ಕೂ ನಮಗೂ ಯಾವುದೇ ಸಂಬಂಧ ಇಲ್ಲ. ಅದಕ್ಕೆ ಯಾವುದೇ ಪರವಾನಿಗೆಯನ್ನೂ ದೇಗುಲದಿಂದ ನೀಡಲಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಕ್ರಿಕೆಟಿಗ ಕೆ ಎಲ್ ರಾಹುಲ್ ಭೇಟಿ