ಮಂಗಳೂರು: ನಗರದ ಕಿನ್ನಿಗೋಳಿಯ ಕುಟುಂಬವೊಂದು ಮಿದುಳು ನಿಷ್ಕ್ರಿಯಗೊಂಡ ತಮ್ಮ ಕುಟುಂಬ ಸದಸ್ಯೆ ಲಿಂಡಾ ಶರಲ್ ಡಿಸೋಜರವರ ಅಂಗಾಂಗ ದಾನ ಮಾಡುವ ಮೂಲಕ ಆರು ಜನರ ಜೀವ ಉಳಿಸಲು ಕಾರಣವಾಗಿದೆ.
ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಲಿಂಡಾ ಶರಲ್ ಡಿಸೋಜ(41) ರವರು ತೀವ್ರ ನಿಗಾ ಘಟಕದಲ್ಲಿದ್ದರು. ಆದರೆ ನಿನ್ನೆ ಅವರ ಮಿದುಳು ನಿಷ್ಕ್ರಿಯಗೊಂಡ ಹಿನ್ನೆಲೆಯಲ್ಲಿ ಕುಟುಂಬಸ್ಥರು ಅಂಗಾಂಗ ದಾನ ಮಾಡಲು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಅಂಗಾಂಗ ದಾನ ಪ್ರಕ್ರಿಯೆ ನಡೆದಿದೆ.
ಈ ಮೂಲಕ ಹೃದಯ ಮತ್ತು ಶ್ವಾಸಕೋಶವನ್ನು ಚೆನ್ನೈನ ಎಂಜಿಎಂ ಆಸ್ಪತ್ರೆ, ಯಕೃತ್ತನ್ನು ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆ, ಕಿಡ್ನಿಗಳನ್ನು ಮಂಗಳೂರಿನ ಎ.ಜೆ.ಆಸ್ಪತ್ರೆ ಮಣಿಪಾಲದ ಕೆಎಂಸಿ ಆಸ್ಪತ್ರೆ ಹಾಗೂ ಚರ್ಮವನ್ನು ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ರವಾನೆ ಮಾಡಿ ಅಲ್ಲಿರುವ ರೋಗಿಗಳಿಗೆ ಅಳವಡಿಸಲಾಗುತ್ತದೆ.
ಮಂಗಳೂರಿನ ಕಿನ್ನಿಗೋಳಿಯ ಲಿಂಡಾ ಶರಲ್ ಅವರು ಬೆಂಗಳೂರಿನಲ್ಲಿ ಬ್ಯಾಂಕ್ ಉದ್ಯೋಗದಲ್ಲಿದ್ದರು. ಕಳೆದ ನಾಲ್ಕು ವರ್ಷಗಳ ಹಿಂದೆ ಬೆಂಗಳೂರಿನಿಂದ ಬಂದು ಕುಟುಂಬಸ್ಥರೊಂದಿಗೇ ಕಿನ್ನಿಗೋಳಿಯ ಮನೆಯಲ್ಲಿ ನೆಲೆಸಿದ್ದರು. ಈ ನಡುವೆ ಅವರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದು, ನಗರದ ಕಂಕನಾಡಿಯಲ್ಲಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಆದರೆ ಜುಲೈ 11ರಂದು ತೀವ್ರ ತಲೆನೋವು ಎಂದು ಮತ್ತೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಬಂದ ಲಿಂಡಾ ಶರಲ್ ಡಿಸೋಜರಿಗೆ ತಪಾಸಣೆ ನಡೆಸಿದಾಗ ಬಿಪಿ ಹೈ ಆಗಿದ್ದು, ತಕ್ಷಣ ಆಸ್ಪತ್ರೆಯಲ್ಲಿ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಎರಡು ಮೂರು ದಿನಗಳಿಂದ ಅವರ ದೇಹಸ್ಥಿತಿ ಹದಗೆಡುತ್ತಾ ಬಂದಿದೆ. ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ್ದು, ಬದುಕುವ ಸಾಧ್ಯತೆಗಳು ಇಲ್ಲ ಎಂದು ಅರಿತು ಅವರ ಸಹೋದರರಾದ ಸಂತೋಷ್ ಪ್ರಕಾಶ್ ಡಿಸೋಜ ಹಾಗೂ ಲ್ಯಾನ್ಸಿ ಡಿಸೋಜ ಅವರು ಅಂಗಾಂಗ ದಾನಕ್ಕೆ ನಿರ್ಧರಿಸಿದ್ದಾರೆ.
ಫಾದರ್ ಮುಲ್ಲರ್ ಆಸ್ಪತ್ರೆಯ ವೈದ್ಯಕೀಯ ವರಿಷ್ಠಾಧಿಕಾರಿ ಡಾ.ಉದಯ ಕುಮಾರ್ ಅವರು ಮಾಹಿತಿ ನೀಡಿ, ಡಾ.ವೆಂಕಟೇಶ್, ಡಾ.ರಾಘವೇಂದ್ರ, ಡಾ.ಜೇವರ್ ಲೋಬೊ, ಡಾ.ಮಂಜುನಾಥ ವೈದ್ಯರ ತಂಡ ಲಿಂಟಾ ಶರಲ್ ಡಿಸೋಜ ಅವರನ್ನು ಚಿಕಿತ್ಸೆ ನಡೆಸುತ್ತಿದ್ದರು.
ಇದನ್ನೂ ಓದಿ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ 'ಲೈಂಗಿಕ ವಿರೋಧಿ ಹಾಸಿಗೆ' ಬಳಕೆ.. ತಮಾಷೆ ಎನಿಸಿದರೂ ನಿಜ ಕಣ್ರೀ..
ಇಂದು ಬೆಳಗ್ಗೆ ಚೆನ್ನೈ ಹಾಗೂ ಬೆಂಗಳೂರಿನಿಂದ ವೈದ್ಯರುಗಳ ತಂಡ ಬಂದು ದೇಹದಿಂದ ಅಂಗಾಂಗ ಬೇರ್ಪಡಿಸುವ ಕಾರ್ಯ ಮಾಡಲಾಯಿತು. ಬಳಿಕ ಈ ಅಂಗಾಂಗಳನ್ನು ಶೀತಲ ಘಟಕದಲ್ಲಿ ಇರಿಸಿ ಝೀರೋ ಟ್ರಾಫಿಕ್ ಮೂಲಕ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೊಂಡೊಯ್ದು ವಿಮಾನದ ಮೂಲಕ ರವಾನೆ ಮಾಡಲಾಯಿತು ಎಂದು ಹೇಳಿದರು.