ಕಡಬ (ದಕ್ಷಿಣಕನ್ನಡ): ಕೋವಿಡ್-19 ಕಾರಣದಿಂದಾಗಿ ಶಾಲಾ - ಕಾಲೇಜುಗಳು ಸ್ಥಗಿತಗೊಂಡಿವೆ. ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಈಗಾಗಲೇ ಆನ್‌ಲೈನ್ ತರಗತಿಗಳು ಆರಂಭಗೊಂಡಿವೆ. ಸರ್ಕಾರ ಆನ್‌ಲೈನ್ ತರಗತಿಗೆ ಉತ್ತೇಜನ ನೀಡಬೇಕು ಎಂದು ಹೇಳುತ್ತಿದ್ದರೂ ಗ್ರಾಮೀಣ ಪ್ರದೇಶಗಳಲ್ಲಿ ವಾಸ್ತವ ಪರಿಸ್ಥಿತಿ ಬೇರೆಯೇ ಇದೆ.
ಕಲಿಕೆಯಲ್ಲಿ ಮುಂದಿರುವ ಈ ಬಾಲಕನ ಹೆಸರು ವರುಣ್. ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ದೊಡ್ಡಕೊಪ್ಪ ನಿವಾಸಿ. ಎಲ್ಲ ವಿದ್ಯಾರ್ಥಿಗಳಂತೆ ತಾನೂ ಕಲಿತು ತನ್ನ ಕುಟುಂಬಕ್ಕೆ, ಅನಾರೋಗ್ಯ ಪೀಡಿತ ತಂದೆಗೆ ಆಸರೆಯಾಗಬೇಕು ಎಂಬುದು ಈತನ ಅಭಿಲಾಷೆ. ಆದರೆ ತನ್ನ ಕುಟುಂಬದ ಬಡತನ ಇದಕ್ಕೆ ಆಸ್ಪದ ನೀಡುತ್ತಿಲ್ಲ.
ವರುಣ್ ತಂದೆ ಮೋನಪ್ಪ ಕುಂಬಾರರು ಮೊದಲೇ ಅನಾರೋಗ್ಯ ಪೀಡಿತರು. ತಾಯಿ ಬೀಡಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ತಂಗಿ ಎಂಟನೇ ತರಗತಿ ಓದುತ್ತಿದ್ದಾರೆ. ಬಡತನದಲ್ಲಿ ದಿನದೂಡುತ್ತಿರುವ ವರುಣ್ ಮನೆಯಲ್ಲಿ ಆನ್‌ಲೈನ್ ತರಗತಿಗೆ ಬೇಕಾದ ಒಂದು ಟಿವಿಯಾಗಲೀ, ಸ್ಮಾರ್ಟ್ ಫೋನ್ ಆಗಲೀ ಇಲ್ಲ.
ಇಷ್ಟು ಮಾತ್ರವಲ್ಲದೇ ಇವರಿಗೆ ವಾಸಕ್ಕೆ ಒಂದು ಸರಿಯಾದ ಮನೆಯಾಗಲೀ, ಶೌಚಾಲಯವಾಗಲೀ ಇಲ್ಲ. ಎಲ್ಲ ಮಕ್ಕಳು ಟಿವಿ, ಮೊಬೈಲ್ ಮೂಲಕ ಶಿಕ್ಷಣ ಪಡೆಯುತ್ತಿರಬೇಕಾದರೆ ಇವರು ತಮ್ಮ ಭವಿಷ್ಯದ ಬಗ್ಗೆ ಚಿಂತೆಯಲ್ಲಿದ್ದಾರೆ.
ಒಟ್ಟಿನಲ್ಲಿ ಸರ್ಕಾರವು ಗ್ರಾಮೀಣ ಭಾಗದ ಈ ವಿದ್ಯಾರ್ಥಿಗಳು ಸೇರಿದಂತೆ ಗ್ರಾಮೀಣ ಭಾಗದ ಮಕ್ಕಳ ಭವಿಷ್ಯದ ಕುರಿತಾಗಿಯೂ ಚಿಂತಿಸಬೇಕಾಗಿದೆ. ಇನ್ನು ಸಹೃದಯ ದಾನಿಗಳು ಈ ಕುಟುಂಬಕ್ಕೆ ನೆರವು ನೀಡುವ ಮೂಲಕ ಈ ಮಕ್ಕಳ ಬಾಳಿಗೆ ಬೆಳಕಾಗಬೇಕಿದೆ.