ಬಂಟ್ವಾಳ: ಸರಕಾರಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಮಹಿಳೆಯೊಬ್ಬರ ಜಡೆ ಸವರಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ಆರೋಪಿಯನ್ನು ಶೀಘ್ರವಾಗಿ ಬಂಧಿಸುವಂತೆ ಒತ್ತಾಯಿಸಿದ್ದಾರೆ.
ಘಟನೆಯ ತರುವಾಯ ಹಿಂದು ಜಾಗರಣಾ ವೇದಿಕೆ ಅಧ್ಯಕ್ಷ ತಿರುಲೇಶ್ ಬೆಳ್ಳೂರು ನೀಡಿದ ದೂರಿನನ್ವಯ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಗಳೂರು - ಧರ್ಮಸ್ಥಳ ಮಾರ್ಗವಾಗಿ ಚಲಿಸುವ ಕೆಎಸ್ಆರ್ಟಿಸಿ ಬಸ್ ಬಂಟ್ವಾಳ ಕಸಬಾ ಗ್ರಾಮದ ಜಕ್ರಿಬೆಟ್ಟು ಎಂಬಲ್ಲಿಗೆ ಸಂಜೆ ಸುಮಾರು 4.30 ಗಂಟೆಯ ಸಮಯಕ್ಕೆ ತಲುಪಿದಾಗ, ಮಹಿಳೆಯರು ಕುಳಿತಿರುವ ಸೀಟಿನ ಹಿಂಬದಿಯ ಸೀಟಿನಲ್ಲಿನ ವ್ಯಕ್ತಿ ಮುಂದಿನ ಸೀಟಿನಲ್ಲಿ ಕುಳಿತ ಮಹಿಳೆಯ ಜಡೆ ಎಳೆಯುವುದು, ಬೆನ್ನಿನ ಹಿಂಬದಿಯಿಂದ ಸ್ಪರ್ಶಿಸಿ ಮಹಿಳೆಯ ಮಾನಕ್ಕೆ ಕುಂದುಂಟು ಮಾಡಿದ್ದಾನೆ ಎಂದು ಆರೋಪಿಸಿ ದೂರು ನೀಡಲಾಗಿದೆ. ಜೊತೆಗೆ ಆತನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ದಾಖಲಿಸಿದ್ದಾರೆ.
ಮಂಗಳೂರಿನಿಂದ ಸಂಚಾರ ಮಾಡುತ್ತಿದ್ದ ಸರ್ಕಾರಿ ಬಸ್ನಲ್ಲಿದ್ದ ಪ್ರಯಾಣ ಮಾಡುತ್ತಿದ್ದ ಮಹಿಳೆಯರು ಹಿಂಬದಿ ಶೀಟಿನಲ್ಲಿ ಕುಳಿತುಕೊಂಡ ವ್ಯಕ್ತಿಯೊಬ್ಬ ಮಹಿಳೆಯ ಜಡೆಯನ್ನು ಸವರಿದ ವಿಡಿಯೋವನ್ನು ಸಹಪ್ರಯಾಣಿಕರು ಚಿತ್ರೀಕರಣ ಮಾಡಿದ್ದಾರೆ. ವಿಡಿಯೋ ವೈರಲ್ ಆದ ಬೆನ್ನಲ್ಲೆ ಹಿಂದೂ ಜಾಗರಣ ವೇದಿಕೆಯಿಂದ ಬಂಟ್ವಾಳ ನಗರ ಠಾಣೆಗೆ ದೂರು ನೀಡಲಾಯಿತು. ಆರೋಪಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಂಟ್ವಾಳ ಶಾಸಕ ರಾಜೇಶ ನಾಯ್ಕ್ ಅವರು ಒತ್ತಾಯಿಸಿದ್ದಾರೆ.
ವ್ಯಕ್ತಿಯ ಕೈ ಕತ್ತರಿಸಿ ಪರಾರಿಯಾಗಿದ್ದ ಆರೋಪಿ ಬಂಧನ: ವ್ಯಕ್ತಿಯೊಬ್ಬನನ್ನು ಕೊಲೆ ಮಾಡಲು ಯತ್ನಿಸಿ ವಿಫಲಗೊಂಡು, ಆತನ ಕೈಯನ್ನು ತುಂಡರಿಸಿ ಪರಾರಿಯಾಗಿದ್ದ ಆರೋಪಿಯನ್ನು ಬಂಟ್ವಾಳ ನಗರ ಠಾಣೆಯ ಪೋಲೀಸರು ಬಂಧಿಸಿದ್ದಾರೆ. ಸಂತೋಷ್ ಬಂಧಿತ ಆರೋಪಿ. ಬಂಟ್ವಾಳ ನಿವಾಸಿ ಶಿವರಾಜ್ ಕುಲಾಲ್ ಎಂಬ ವ್ಯಕ್ತಿಯ ಕೈಯನ್ನು ಕತ್ತರಿಸಿ ಆರೋಪಿ ಸಂತೋಷ್ ಪರಾರಿಯಾಗಿರುವ ದೂರು ಬಂಟ್ವಾಳ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಆರೋಪಿಯನ್ನು ಬಂಧಿಸುವಲ್ಲಿ ಇನ್ಸ್ ಪೆಕ್ಟರ್ ವಿವೇಕಾನಂದ ನೇತೃತ್ವದ ಎಸ್.ಐ.ರಾಮಕೃಷ್ಣ ತಂಡ ಯಶಸ್ವಿಯಾಗಿದೆ.
ಬಂಟ್ವಾಳದ ಕೆಳಗಿನಮಂಡಾಡಿ ಎಂಬಲ್ಲಿ ಕಳೆದ ಶನಿವಾರ ತಡರಾತ್ರಿ ಈ ಘಟನೆ ನಡೆದಿದ್ದು, ಈ ಸಂದರ್ಭ, ತಲವಾರು ಏಟಿಗೆ ಕೈ ತುಂಡಾಗಿ ನೆಲಕ್ಕೆ ಬಿದ್ದಿತ್ತು. ಆರೋಪಿ ಸಂತೋಷ್ ಗಾಗಿ ಬಂಟ್ವಾಳ ನಗರ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಗಾಯಾಳು ಶಿವರಾಜ್ ಕುಲಾಲ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೈ ಕಳೆದುಕೊಂಡಿದ್ದಾರೆ.
ಮಂಗಳೂರಿನ ಖಾಸಗಿ ಕಂಪನಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಿಕೊಂಡಿದ್ದ ಶಿವರಾಜ್ ಕೆಲಸ ಮುಗಿಸಿ ಮನೆಯಲ್ಲಿದ್ದರು. ಶನಿವಾರ ಮಧ್ಯರಾತ್ರಿ ಆತನಿಗೆ ಕರೆ ಮಾಡಿದ ಪರಿಚಿತ ಸಂತೋಷ್, ನಿನ್ನಲ್ಲಿ ಮಾತನಾಡಲು ಇದೆ ಎಂದಿದ್ದಾನೆ. ನಾನು ಈಗ ಬರುವುದಿಲ್ಲ ಎಂದರೂ ಮತ್ತೆ ಒತ್ತಾಯ ಮಾಡಿ ಅರ್ಬಿಗುಡ್ಡೆಯ ಗಣೇಶ್ ಸ್ಟೋರ್ಸ್ ಅಂಗಡಿ ಹತ್ತಿರ ಬಾ ಎಂದು ಹೇಳಿದ್ದಾನೆ.
ಅದರಂತೆ ಶಿವರಾಜ್ ಕುಲಾಲ್ ಅಲ್ಲಿ ಹೋಗಿದ್ದು, ಆತನು ವೈಯಕ್ತಿಕ ವಿಚಾರವೊಂದನ್ನು ಮಾತನಾಡಲು ಆರಂಭಿಸಿದ್ದಾನೆ. ಈ ಸಂದರ್ಭ ಮಾತು ತಾರಕಕ್ಕೇರಿ ರೊಚ್ಚಿಗೆದ್ದ ಸಂತೋಷ್, ಸಣ್ಣ ತಲವಾರಿನಿಂದ ಶಿವರಾಜ್ ಅವರ ಕುತ್ತಿಗೆಯ ಎಡಬದಿಗೆ ಬಲವಾಗಿ ಬೀಸಿ ಗಾಯಗೊಳಿಸಿದ್ದಾನೆ. ಮತ್ತೆ ದಾಳಿ ಮಾಡಿದಾಗ, ಶಿವರಾಜ್ ಎಡಗೈಯನ್ನು ಅಡ್ಡ ಹಿಡಿದಿದ್ದನು. ತಲವಾರು ಬೀಸಿದ ವೇಗಕ್ಕೆ ಕೈ ತುಂಡಾಗಿ ನೆಲಕ್ಕೆ ಬಿದ್ದಿದೆ. ಇದನ್ನು ಕಂಡು ಬೆದರಿದ ಆರೋಪಿ ಸಂತೋಷ್ ಅಲ್ಲಿಂದ ಓಡಿ ಹೋಗಿದ್ದನು.
ಶಿವರಾಜ್ ತನ್ನ ಗೆಳೆಯ ಧರ್ಮೇಶ್ ಹಾಗೂ ತಮ್ಮನಿಗೆ ಘಟನೆಯ ಮಾಹಿತಿ ನೀಡಿದ್ದನು. ಸ್ಥಳಕ್ಕಾಗಮಿಸಿದ ಅವರು, ಶಿವರಾಜ್ ಚಿಕಿತ್ಸೆಗೆ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ವೆನ್ಲಾಕ್ ಮತ್ತು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈಯಕ್ತಿಕ ವಿಚಾರದ ದ್ವೇಷ ಇಟ್ಟುಕೊಂಡು ತಲವಾರಿನಿಂದ ನನ್ನನು ಹತ್ಯೆ ಮಾಡುಲು ಯತ್ನಿಸಿದ್ದನು ಎಂದು ಆರೋಪಿ ಸಂತೋಷ ವಿರುದ್ಧ ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದ.
ಇದನ್ನೂಓದಿ:ಮಾಸ್ಕ್ ಧರಿಸಿ ಬಂದು ದರೋಡೆ: ತಡರಾತ್ರಿ ಕಾಮಾಕ್ಷಿಪಾಳ್ಯ ವ್ಯಾಪ್ತಿಯಲ್ಲಿ ಘಟನೆ