ಉಪ್ಪಿನಂಗಡಿ: ಲಾರಿ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಸವಾರ ಮೃತಪಟ್ಟಿದ್ದು, ಮತ್ತೋರ್ವನ ಸ್ಥಿತಿ ಗಂಭೀರವಾದ ಘಟನೆ ಉಪ್ಪಿನಂಗಡಿ ಸಮೀಪ ಮಠ ಎಂಬಲ್ಲಿ ನಿನ್ನೆ ರಾತ್ರಿ ನಡೆದಿದೆ.
ಉಪ್ಪಿನಂಗಡಿಯ ನಟ್ಟಿಬೈಲು ನಿವಾಸಿ ಗಣೇಶ್ (23) ಎಂಬುವರು ಮೃತಪಟ್ಟಿದ್ದು, ಪುತ್ತೂರಿನ ಪುರುಷರಕಟ್ಟೆ ನಿವಾಸಿ ನವೀನ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಮಂಗಳೂರು - ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ದುರಂತ ಸಂಭವಿಸಿದೆ.
ಗಣೇಶ್ ಮತ್ತು ನವೀನ್ ಬೈಕ್ನಲ್ಲಿ ಉಪ್ಪಿನಂಗಡಿಯಿಂದ ನೆಲ್ಯಾಡಿ ಕಡೆಗೆ ಹೋಗುತ್ತಿದ್ದಾಗ ಹಾಸನ ಕಡೆಯಿಂದ ಮಂಗಳೂರಿಗೆ ತರಕಾರಿ ಸಾಗಿಸುತ್ತಿದ್ದ ಲಾರಿಯೊಂದು ಮಠ ಎಂಬಲ್ಲಿ ಮುಖಾಮುಖಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರರಿಬ್ಬರೂ ಕೆಳಗೆ ಬಿದ್ದಿದ್ದು, ಗಣೇಶ್ ಅವರನ್ನು ಅಸ್ಪತ್ರೆಗೆ ಸಾಗಿಸುತ್ತಿರುವಾಗ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ನವೀನ್ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.