ಪುತ್ತೂರು: ಕೃಷಿ-ಋಷಿ ಭಾರತ ಸಂಸ್ಕೃತಿಯ ಎರಡು ಕಣ್ಣುಗಳಾಗಿದ್ದು, ಋಷಿಯಲ್ಲಿ ಆಧ್ಯಾತ್ಮದ ಆನಂದವಿದ್ದರೆ, ಕೃಷಿ ಶಾರೀರಿಕ ಬದುಕಿಗೆ ಬಲ ತುಂಬುತ್ತದೆ. ಈ ನಿಟ್ಟಿನಲ್ಲಿ ಯುವ ಸಮುದಾಯ ಕೃಷಿ ಸಂಸ್ಕೃತಿಯ ಉಳಿವಿಗಾಗಿ ಮನಸ್ಸು ಮಾಡಬೇಕು ಎಂದು ಒಡಿಯೂರು ಶ್ರೀ ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.
ಓದಿ: ಜಾರಕಿಹೊಳಿ ಸಿಡಿ ಪ್ರಕರಣ: ದೂರು ವಾಪಸ್ ಪಡೆಯಲಿರುವ ದಿನೇಶ್ ಕಲ್ಲಹಳ್ಳಿ
ಶನಿವಾರ ಸಂಜೆ ಕಡಮಜಲು ಕ್ಷೇತ್ರದಲ್ಲಿ ಒಡಿಯೂರು ಜನ್ಮ ಷಷ್ಟ್ಯಬ್ದ ಸಂಭ್ರಮ-2021ರ ಅಂಗವಾಗಿ, ಸಮಗ್ರ ಕೃಷಿ ದರ್ಶನ ಸಂಭ್ರಮ, ಕಡಮಜಲು ಸುಭಾಸ್ ರೈ ಅವರ 70ರ ಸಂಭ್ರಮ ವರ್ಷಾಚರಣೆ, ಕೃಷಿ ಮಾಹಿತಿ ಕಾರ್ಯಾಗಾರ, ಶೃಂಗಾರ ಕೃಷಿ ಸನ್ಮಾನ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಶೃಂಗಾರ ಕೃಷಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಸಂಜೀವ ಮಠಂದೂರು, ಆಧ್ಯಾತ್ಮಿಕ ಬದುಕು ಮೈಗೂಡಿಸಿಕೊಳ್ಳುವುದರ ಜತೆಗೆ ಕೃಷಿಗೆ ಪ್ರಾಧಾನ್ಯತೆ ನೀಡಿ ಯುವ ಪೀಳಿಗೆ ಕೃಷಿಯಲ್ಲಿ ತೊಡಗಿಸಿಕೊಳ್ಳುವುದಕ್ಕೆ ಉತ್ತೇಜನ ನೀಡುವ ಕಡಮಜಲು ಸುಭಾಸ್ ರೈ ಅವರ ಕಾರ್ಯ ಶ್ಲಾಘನೀಯ. ಹಳ್ಳಿ ಬದುಕು ಭಗವಂತನ ಸೃಷ್ಟಿ, ನಗರ ಬದುಕು ಮನುಷ್ಯನ ಸೃಷ್ಟಿ ಎಂಬಂತೆ ಗ್ರಾಮೀಣ ಪ್ರದೇಶದಲ್ಲಿದ್ದುಕೊಂಡು ಕೃಷಿ ಬದುಕು ಶಾಶ್ವತ, ನೆಮ್ಮದಿ ಎಂಬುದನ್ನು ತೋರಿಸಿಕೊಟ್ಟ ಸುಭಾಸ್ ರೈ ಅವರ ಕೃಷಿ ಬದುಕನ್ನು ಎಲ್ಲರೂ ಅಳವಡಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಸಮಾರಂಭದಲ್ಲಿ ಕೃಷಿಯಲ್ಲಿ ತೊಡಗಿಸಿಕೊಂಡು ರಾಜಕೀಯ ಕ್ಷೇತ್ರದಲ್ಲಿ ಶಾಸಕರಾಗಿ ಸೇವೆ ಸಲ್ಲಿಸಿದ ಮಾಜಿ ಶಾಸಕ ರುಕ್ಮಯ್ಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಪುತ್ತೂರು ಕೃಷಿಕ ಸಮಾಜದ ಅಧ್ಯಕ್ಷ ವಿಜಯ ಕುಮಾರ್ ರೈ ಕೋರಂಗ, ಗ್ರಾಪಂ ಅಧ್ಯಕ್ಷರಾದ ರತನ್ ರೈ ಕುಂಬ್ರ, ಕೋಡೆಕುಂಜ ರಮೇಶ್ ರೈ ಸಾಂತ್ಯ, ಆಲಡ್ಕ ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಆಳ್ವ ಬೋಳೋಡಿ ಅವರನ್ನು ಸನ್ಮಾನಿಸಲಾಯಿತು.