ಮಂಗಳೂರು : ರಾಜ್ಯದಲ್ಲಿ ದಿನೇ ದಿನೆ ಏರುತ್ತಿರುವ ಶಬ್ದ ಮಾಲಿನ್ಯ ಮನುಷ್ಯನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಆತಂಕ ಎದುರಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಬ್ದ ಮಾಲಿನ್ಯ ನಿಗದಿತ ಮಟ್ಟದಲ್ಲಿದೆ. ಹಬ್ಬಹರಿದಿನಗಳಲ್ಲಿ ಮಾತ್ರ ಡಿಜೆಗಳಿಂದಲೇ ಹೆಚ್ಚಿನ ಶಬ್ದ ಮಾಲಿನ್ಯ ಆಗುತ್ತಿದೆ ಎಂಬ ದೂರುಗಳು ಬಂದಿವೆ.
ಶಬ್ದ ಮಾಲಿನ್ಯ ತಡೆಗೆ ಸರ್ಕಾರ ನಾನಾ ನಿಯಮಾವಳಿಗಳನ್ನು ರೂಪಿಸಿದೆ. ಶಬ್ದ ಮಾಲಿನ್ಯ ನಿಯಂತ್ರಣಕ್ಕೆ ನಾನಾ ವಿಭಾಗಗಳನ್ನು ಮಾಡಿ ಮಾರ್ಗಸೂಚಿಗಳನ್ನು ಈಗಾಗಲೇ ಸರ್ಕಾರ ಪ್ರಕಟಿಸಿದೆ. ಮಂಗಳೂರಿನಲ್ಲಿ ಡಿಜೆಗಳಿಂದಲೇ ಹೆಚ್ಚಿನ ಶಬ್ದ ಮಾಲಿನ್ಯ ಆಗುತ್ತಿದೆ ಎಂಬ ದೂರು ಪದೇ ಪದೆ ಕೇಳಿ ಬರುತ್ತಿವೆ.
ಸರ್ಕಾರದ ನಿಯಮಾವಳಿಗಳು : ಸರ್ಕಾರ ಶಬ್ದ ಮಾಲಿನ್ಯ ತಡೆಗೆ 2010ರಲ್ಲಿ ನಾಯಿಸ್ ಪೊಲ್ಯುಷನ್ ರೆಗ್ಯುಲೇಷನ್ ಕಂಟ್ರೋಲ್ ಬೋರ್ಡ್ ಸ್ಥಾಪಿಸಿ ನಿಯಮಾವಳಿಗಳನ್ನು ರೂಪಿಸಿದೆ. ಕೈಗಾರಿಕಾ ಪ್ರದೇಶ, ವಸತಿ ಪ್ರದೇಶ, ಕಮರ್ಷಿಯಲ್ ಪ್ರದೇಶ ಮತ್ತು ಸೈಲೆಂಟ್ ಪ್ರದೇಶ ಎಂಬ ವಿಭಾಗಗಳನ್ನು ಮಾಡಲಾಗಿದೆ. ರಾತ್ರಿ ಮತ್ತು ಹಗಲಿನಲ್ಲಿ ಇಷ್ಟೇ ಶಬ್ದಗಳು ಈ ಪ್ರದೇಶಗಳಲ್ಲಿ ಹೊರ ಸೂಸಬೇಕೆಂಬ ನಿಯಮಗಳಿವೆ.
ಕೈಗಾರಿಕಾ ಪ್ರದೇಶಗಳಲ್ಲಿ ಹಗಲಿನಲ್ಲಿ 75 ಡಿಬಿಎ ರಾತ್ರಿ ಹೊತ್ತಿನಲ್ಲಿ 70 ಡಿಬಿಎ ಮೀರಬಾರದು. ಜನವಸತಿ ಪ್ರದೇಶದಲ್ಲಿ ಹಗಲಿನಲ್ಲಿ 55 ಡಿಬಿಎ, ರಾತ್ರಿ ಹೊತ್ತಿನಲ್ಲಿ 45 ಡಿಬಿಎ, ಕಮರ್ಷಿಯಲ್ ಪ್ರದೇಶದಲ್ಲಿ ಹಗಲು ಹೊತ್ತಿನಲ್ಲಿ 65 ಡಿಬಿಎ, ರಾತ್ರಿ ಹೊತ್ತಿನಲ್ಲಿ 55 ಡಿಬಿಎ, ಸೈಲೆಂಟ್ ಪ್ರದೇಶದಲ್ಲಿ ಹಗಲು ಹೊತ್ತಿನಲ್ಲಿ 50 ಡಿಬಿಎ, ರಾತ್ರಿ ಹೊತ್ತಿನಲ್ಲಿ 40 ಡಿಬಿಎ ಇರಬೇಕೆಂದು ನಿಯಮವಿದೆ.
ನಿಗದಿತ ಮಟ್ಟದಲ್ಲಿದೆ ಶಬ್ದಮಾಲಿನ್ಯ: ಮಂಗಳೂರಿನಲ್ಲಿ ಕೈಗಾರಿಕಾ, ರೆಸಿಡೆನ್ಸಿ, ಕಮರ್ಷಿಯಲ್ ಮತ್ತು ಸೈಲೆಂಟ್ ಝೋನ್ನಲ್ಲಿ ಶಬ್ದಮಾಲಿನ್ಯ ನಿಗದಿತ ಮಟ್ಟದಲ್ಲಿದೆ. ಆದರೆ, ಕೆಲ ಹಬ್ಬ- ಹರಿದಿನಗಳು ಬರುವ ಸಂದರ್ಭದಲ್ಲಿ ಮೈಕ್ ಮತ್ತು ಡಿಜೆಗಳಿಂದ ಆಗುವ ಶಬ್ದ ಮಾಲಿನ್ಯದ ಬಗ್ಗೆ ದೂರು ಬರುತ್ತಿರುತ್ತವೆ ಅಂತಾರೆ ವಾಯುಮಾಲಿನ್ಯ ನಿಯಂತ್ರಣ ಇಲಾಖೆ ಉಪನಿರ್ದೇಶಕ ಕೀರ್ತಿ ಕುಮಾರ್.
ಕೈಗಾರಿಕಾ ಪ್ರದೇಶದಲ್ಲಿ ಸರ್ಕಾರ ನಿರ್ದೇಶಿಸಿದ ಶಬ್ದ ಮಾಲಿನ್ಯ ಮೀರದಂತೆ ಪರಿಶೀಲನೆಯನ್ನು ನಿಗದಿತ ಸಮಯದಲ್ಲಿ ಮಾಡಲಾಗುತ್ತಿರುತ್ತದೆ. ಒಂದು ವೇಳೆ ಹೆಚ್ಚು ಶಬ್ದ ಬಂದರೆ ಅವರಿಗೆ ನೋಟಿಸ್ ನೀಡಿ ಸರಿಪಡಿಸಲು ಸೂಚಿಸಲಾಗುತ್ತದೆ.
ಕಮರ್ಷಿಯಲ್ ಪ್ರದೇಶದಲ್ಲಿ ವಾಹನಗಳ ಓಡಾಟದ ಸಂದರ್ಭದಲ್ಲಿ ಬರುವ ಶಬ್ದ ಮಾಲಿನ್ಯ ಸಾಮಾನ್ಯವಾಗಿ ಇದ್ದೇ ಇರುತ್ತದೆ. ಕೆಲವೊಮ್ಮೆ ಜನವಸತಿ ಪ್ರದೇಶದಲ್ಲಿ ಜನರೇಟರ್ನಿಂದಲೂ ಉಂಟಾಗುವ ಶಬ್ದ ಮಾಲಿನ್ಯ ಕುರಿತು ದೂರುಗಳು ಬಂದರೆ ಅದನ್ನು ಸರಿಪಡಿಸಲು ಸೂಚನೆ ನೀಡಲಾಗುತ್ತದೆ ಎಂದು ಕೀರ್ತಿ ಕುಮಾರ್ ತಿಳಿಸಿದರು.
ಈ ಸುದ್ದಿಯನ್ನೂ ಓದಿ: ಶಿವಮೊಗ್ಗದಲ್ಲಿ ಹೆಚ್ಚಿದ ಶಬ್ದ ಮಾಲಿನ್ಯ ಪ್ರಮಾಣ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಶಬ್ದ ಮಾಲಿನ್ಯ ಹೆಚ್ಚಳವಾಗದಂತೆ ಮಾಲಿನ್ಯ ನಿಯಂತ್ರಣ ಮಂಡಳಿ ಕ್ರಮ ತೆಗೆದುಕೊಳ್ಳುತ್ತಿದೆ. ದೂರುಗಳ ಆಧಾರದಲ್ಲಿ ಅದನ್ನು ಪರಿಹರಿಸುವ ಪ್ರಯತ್ನ ಮಾಡುತ್ತಿದೆ.