ಮಂಗಳೂರು: ರಾಜಕೀಯದಲ್ಲಿ ತಮ್ಮ ನೆಲೆಯನ್ನು ಕಳೆದುಕೊಂಡು ಅಪ್ರಸ್ತುತರಾಗುತ್ತಿರುವ ಕಾರಣದಿಂದ ಮಾಜಿ ಸಿಎಂ ಸಿದ್ದರಾಮಯ್ಯರಿಗೆ ಹತಾಶೆಯ ಮನೋಭಾವದಿಂದ ಬುದ್ಧಿ ಭ್ರಮಣೆಯಾಗಿದೆಯೇ ಎಂದು ಸಂದೇಹವಾಗುತ್ತಿದೆ ಎಂದು ರಾಜ್ಯ ಬಿಜೆಪಿ ವಕ್ತಾರ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದರು.
ನಗರದ ಕೊಡಿಯಾಲ್ ಬೈಲ್ನಲ್ಲಿರುವ ಅಟಲ್ ಸೇವಾ ಕೇಂದ್ರದಲ್ಲಿ ಮಾತನಾಡಿದ ಅವರು, ಈ ಕಾರಣದಿಂದಲೇ ಸಿದ್ದರಾಮಯ್ಯರು ಇತ್ತೀಚೆಗೆ ಅತ್ಯಂತ ಕೀಳುಮಟ್ಟದ, ಬಾಲಿಶ, ಬೇಜವಾಬ್ದಾರಿ, ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂಬ ಸಂದೇಹ ಬರುತ್ತಿದೆ ಎಂದರು.
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮಹಾನಾಯಕ, ಮೀರ್ ಸಾದಕ್ ಪದ ಬಳಕೆಯಾಗುತ್ತಿದ್ದು, ಈ ಮಹಾನಾಯಕ, ಮೀರ್ ಸಾದಕ್ ಅವರೊಳಗಿನ ಆಂತರಿಕ ಕಲಹದಿಂದ ದೆಹಲಿಗೆ ಹೋಗಿದೆ. ಅಲ್ಲಿ ಹೈಕಮಾಂಡ್ನಿಂದ ಛೀಮಾರಿ ಹಾಕಿಸಿಕೊಂಡಿದ್ದಾರೆ. ಇದು ಇನ್ನಷ್ಟು ಅವರನ್ನು ಹತಾಶೆಗೆ ಒಳಗಾಗಿಸಿದೆ. ಅಹಿಂದ ಸಮುದಾಯದಿಂದಲೂ ತಿರಸ್ಕರಿಸಲ್ಪಟ್ಟ ಸಿದ್ದರಾಮಯ್ಯ ಇದೀಗ ಅನುವಂಶೀಯತೆಯ ಬಗ್ಗೆ ಮಾತನಾಡುತ್ತಿದ್ದಾರೆ. ಅದಕ್ಕಿಂತ ಮೊದಲು ಅವರು ತಮ್ಮ ವಂಶಾವಳಿಗಳನ್ನು ಪರಿಶೀಲನೆ ನಡೆಸಲಿ. ವಿದೇಶದಲ್ಲಿ ನಿಗೂಢವಾಗಿ ಮೃತಹೊಂದಿರುವ ಅವರ ಪುತ್ರನ ಸಾವಿಗೂ ವಂಶಾವಳಿಯೇ ಕಾರಣವೇ ಎಂಬ ಅನುಮಾನ ಮೂಡುತ್ತಿದೆ ಎಂದರು.ಯಡಿಯೂರಪ್ಪ ತಮ್ಮ ರಾಜಿನಾಮೆ ನೀಡುವ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತನಾಗಿ ರಾಜ್ಯವ್ಯಾಪಿ ಸಂಘಟನೆ ಮಾಡಿ, ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೇರಿಸುವುದು ತನ್ನ ಉದ್ದೇಶ ಅಂದಿದ್ದಾರೆ. ಆದ್ದರಿಂದ ಆಗಸ್ಟ್ 15 ರಿಂದ ರಾಜ್ಯವಾಪಿ ಪಕ್ಷ ಸಂಘಟನೆ ಮಾಡಲು ಪ್ರವಾಸ ಮಾಡಲಿದ್ದಾರೆ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಜಗದೀಶ್ ಶೆಟ್ಟರ್ ಹಾಗೂ ಈಶ್ವರಪ್ಪನವರು ತಮ್ಮ ಹೇಳಿಕೆಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಇವರಿಬ್ಬರ ಹೇಳಿಕೆಗಳಲ್ಲಿ ಯಾವುದೇ ಗೊಂದಲಗಳಿಲ್ಲ. ಅವರು ನಮ್ಮೊಂದಿಗೇ ಇರುವುದರಿಂದ ಅವರಿಬ್ಬರನ್ನು ಸಮಾಧಾನ ಪಡಿಸುವ ಪ್ರಶ್ನೆಯೇ ಬರೋದಿಲ್ಲ ಎಂದು ಕ್ಯಾ.ಗಣೇಶ್ ಕಾರ್ಣಿಕ್ ಹೇಳಿದರು. ಇದನ್ನೂ ಓದಿ:ಸಿದ್ದರಾಮಯ್ಯ ಸಂಯಮ ಕಳೆದುಕೊಂಡು ಮಾತನಾಡುತ್ತಿದ್ದಾರೆ: BSY