ಮಂಗಳೂರು: ಕೇರಳದಲ್ಲಿ ನಿಫಾ ವೈರಸ್ ಪತ್ತೆ ಹಿನ್ನೆಲೆಯಲ್ಲಿ ರಾಜ್ಯದ ಗಡಿ ಜಿಲ್ಲೆಯಾಗಿರುವ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಗಾ ಇಡಲು ಆರೋಗ್ಯ ಇಲಾಖೆ ಮುಂದಾಗಿದೆ. ಮಂಗಳೂರಿನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸುದರ್ಶನ್ ಅವರು ನಿಫಾ ವೈರಸ್ ಪತ್ತೆಯಾದ ಕಾರಣ ದ.ಕನ್ನಡ ಜಿಲ್ಲೆಯ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಐಸೋಲೇಷನ್ ವಾರ್ಡ್ ತೆರೆಯಲಾಗಿದೆ ಎಂದು ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಫಾ ವೈರಸ್ ಪ್ರಕರಣ ಈವರೆಗೆ ಪತ್ತೆಯಾಗಿಲ್ಲ. ಈ ಹಿಂದೆ ಕೇರಳದಲ್ಲಿ ಎರಡು ಬಾರಿ ನಿಫಾ ವೈರಸ್ ಪತ್ತೆಯಾದಾಗಲೂ ನಮ್ಮ ಜಿಲ್ಲೆಯಲ್ಲಿ ನಿಗಾ ವಹಿಸಲಾಗಿತ್ತು. ಆದರೆ ಯಾವುದೇ ಪ್ರಕರಣ ಪತ್ತೆಯಾಗಿಲ್ಲ. ಸದ್ಯ ಜಿಲ್ಲೆಯಲ್ಲಿ ಜ್ವರ ಸಮೀಕ್ಷೆ ಮಾಡಲಾಗಿದೆ. ಜಿಲ್ಲೆಯ ಗಡಿಭಾಗದಲ್ಲಿರುವ ಆರೋಗ್ಯ ಇಲಾಖೆಯ ಸಿಬ್ಬಂದಿಯು ವಾಟ್ಸಪ್ ಗ್ರೂಪ್ ಮಾಡಿ ನಿಗಾವಹಿಸಿದ್ದಾರೆ ಎಂದರು.
ನಿಫಾ ವೈರಸ್ಗೆ ನಿರ್ದಿಷ್ಟ ಔಷಧಿಯಿಲ್ಲ. ಆದರೆ ರೋಗಿಗೆ ಕಂಡುಬರುವ ರೋಗದ ಲಕ್ಷಣಗಳಿಗೆ ಔಷಧಿ ನೀಡಲಾಗುತ್ತದೆ. ಈ ರೋಗದ ಪತ್ತೆಗೆ ಅಗತ್ಯ ಇರುವವರ ರಕ್ತ ಪರೀಕ್ಷೆಯನ್ನು ಪುಣೆಗೆ ಕಳುಹಿಸಲಾಗುತ್ತದೆ. 48 ಗಂಟೆಗಳ ಅವಧಿಯಲ್ಲಿ ರಿಪೋರ್ಟ್ ಕೈಸೇರುತ್ತದೆ. ಈ ರೋಗಿಗೆ ರೋಗ ಲಕ್ಷಣದ ಆಧಾರದ ಮೇಲೆ ಚಿಕಿತ್ಸೆ ನೀಡಲಾಗುತ್ತದೆ. ಈ ರೋಗದಲ್ಲಿ 60% ಮರಣ ಪ್ರಮಾಣ ಇದೆ ಎಂದು ಮಾಹಿತಿ ನೀಡಿದರು. ಮಾಧ್ಯಮಗೋಷ್ಟಿಯಲ್ಲಿ ಜಿಲ್ಲಾ ಸರ್ವೇಕ್ಷಣ ಅಧಿಕಾರಿ ಡಾ. ನವೀನ್ ಚಂದ್ರ ಇದ್ದರು.
ನಿಫಾ ವೈರಾಣು ಜ್ವರ ಎಂದರೇನು: ಇದೊಂದು ವೈರಾಣು ಸೋಂಕಾಗಿದ್ದು, ನಿಫಾ ಎನ್ಸಫಲೈಟಿಸ್ ಎಂದು ಹೆಸರಿಸಲಾಗಿದೆ. 1998ರಲ್ಲಿ ಮಲೇಷಿಯಾ ಮತ್ತು ಸಿಂಗಾಪುರ ದೇಶಗಳಲ್ಲಿ ಮೊದಲ ಬಾರಿಗೆ ಕಂಡುಬಂದಿತ್ತು. ಮಲೇಷಿಯಾದ ನಿಫಾ ಎಂಬ ಗ್ರಾಮದಲ್ಲಿ ಈ ವೈರಾಣು ಪತ್ತೆ ಹಚ್ಚಿದ್ದರಿಂದ ಇದಕ್ಕೆ ನಿಫಾ ವೈರಾಣು ಎಂದು ಹೆಸರಿಡಲಾಗಿದೆ. ಈ ಜ್ವರವು ಬಾವಲಿ, ಹಂದಿ, ನಾಯಿ, ಕುರಿ, ಬೆಕ್ಕು ಹಾಗೂ ಮನುಷ್ಯರಿಗೆ ಬಾಧಿಸುತ್ತದೆ. ಇದು ಮಲೇಷಿಯಾ, ಸಿಂಗಾಪುರ, ಭಾರತ ಮತ್ತು ಬಾಂಗ್ಲಾದೇಶಗಳಲ್ಲಿ ಕಾಣಿಸಿಕೊಂಡಿದೆ.
ರೋಗ ಲಕ್ಷಣಗಳು : ಮನುಷ್ಯರಲ್ಲಿ - ಜ್ವರ, ತಲೆನೋವು, ತಲೆಸುತ್ತುವಿಕೆ, ದಿಗ್ಬ್ರಮೆ, ಮಾನಸಿಕ ಗೊಂದಲ, ಜ್ಞಾನ ತಪ್ಪುವುದು, ಅಲ್ಲದೆ ನಂತರ ಸಾವು ಸಂಭವಿಸಬಹುದು.
ಪ್ರಾಣಿಗಳಲ್ಲಿ - ಹಂದಿಗಳಲ್ಲಿ ಉಸಿರಾಟದ ತೊಂದರೆ, ನರದೌರ್ಬಲ್ಯ (ನರಮಂಡಲದ ಸಿಂಡ್ರೋಮ್)
ವೈರಸ್ ಹರಡುವಿಕೆ ಹೇಗೆ?:
- ಸೋಂಕಿತ ಬಾವಲಿಗಳ ನೇರ ಸಂಪರ್ಕದಿಂದ ಹಾಗೂ ಬಾವಲಿಗಳು ಬಿಸಾಡಿದ ಹಣ್ಣು ಹಂಪಲುಗಳನ್ನು ಸೇವಿಸುವುದರ ಮೂಲಕ ಇತರ ಪ್ರಾಣಿಗಳಿಗೆ ಹರಡುತ್ತದೆ.
- ಸೋಂಕಿತ ಪ್ರಾಣಿಗಳಿಂದ ಇತರೆ ಪ್ರಾಣಿಗಳಿಗೆ ಮಲ- ಮೂತ್ರ, ಜೊಲ್ಲು ಮತ್ತು ರಕ್ತದ ನೇರ ಸಂಪರ್ಕದಿಂದ ಹರಡುತ್ತದೆ.
- ಸೋಂಕಿತ ಬಾವಲಿಗಳು ಕಚ್ಚಿದ ಹಣ್ಣುಗಳನ್ನು ಸೇವಿಸುವುದರಿಂದ ಮನುಷ್ಯರಿಗೆ ಹರಡುತ್ತದೆ.
- ಸೋಂಕಿತ ಪ್ರಾಣಿಯ ಮಲ, ಮೂತ್ರ, ಜೊಲ್ಲು ಮತ್ತು ರಕ್ತ ಇವುಗಳ ನೇರ ಸಂಪರ್ಕದಿಂದ ಮನುಷ್ಯರಿಗೆ ಹರಡಲಿದೆ.
ಪತ್ತೆ ಹಚ್ಚುವುದು ಹೇಗೆ?
- ಎಲೀಸಾ ಆಧಾರಿತ ರಕ್ತ ಪರೀಕ್ಷೆಯಿಂದ ನಿಫಾ ವೈರಾಣು ಗುರುತಿಸಬಹುದು.
- ಆರ್.ಟಿ.ಪಿ.ಸಿ.ಆರ್ ಪರೀಕ್ಷೆಯಿಂದ ಈ ರೋಗವನ್ನು ದೃಢಪಡಿಸಲಾಗುತ್ತದೆ.
ನಿಫಾ ವೈರಾಣು ಜ್ವರ ತಡೆಗೆ ಅನುಸರಿಸಬೇಕಾದ ಕ್ರಮಗಳು:
- ಪಕ್ಷಿಗಳು ಮತ್ತು ಪ್ರಾಣಿಗಳು ಕಚ್ಚಿದ ಹಣ್ಣುಗಳನ್ನು ಸೇವಿಸಬಾರದು.
- ಬಾವಲಿಗಳು ಹೆಚ್ಚಾಗಿರುವ ಪ್ರದೇಶಗಳಿಂದ ಸಂಗ್ರಹಿಸಿದ ಸೇಂದಿ/ನೀರಾಗಳನ್ನು ಕುಡಿಯಬಾರದು.
- ತಾಜಾ ತಾಳೆ ಹಣ್ಣಿನ ರಸವನ್ನು ಸೇವಿಸಬಾರದು.
- ಹಣ್ಣು ಮತ್ತು ಒಣ ಖರ್ಜೂರ ಇವುಗಳನ್ನು ಸೇವಿಸುವ ಮೊದಲು ಸಂಪೂರ್ಣವಾಗಿ ಶುದ್ಧೀಕರಿಸಬೇಕು.
- ಅನಾರೋಗ್ಯಪೀಡಿತ ಹಂದಿಗಳನ್ನು ಇತರೆ ಪ್ರಾಣಿಗಳೊಂದಿಗೆ ನೇರ ಸಂಪರ್ಕ ತಪ್ಪಿಸುವುದು.
- ಬಾವಲಿಗಳ ಪ್ರವೇಶವನ್ನು ತಪ್ಪಿಸಲು, ತೆರೆದ ಬಾವಿಗಳಿಗೆ ಜಾಲರಿ ಅಳವಡಿಸುವುದು. ಕೈಗಳನ್ನು ಸಂಪೂರ್ಣವಾಗಿ ಶುದ್ಧೀಕರಿಸಬೇಕು. ಇದು ವೈರಸ್ ತಡೆಗಟ್ಟುವಿಕೆಯ ಬಹುಮುಖ್ಯ ಕ್ರಮವಾಗಿದೆ.
- ನಿಫಾ ವೈರಸ್ ಸೋಂಕಿತ ರೋಗಿಯು ಉಪಯೋಗಿಸಿದ ಬಟ್ಟೆ ಮತ್ತು ಇತರ ಪದಾರ್ಥಗಳಲ್ಲಿ ಸೋಂಕು ನಿವಾರಣೆ ಮಾಡುವುದು, ಸೋಂಕಿತ ರೋಗಿಯು ಕನಿಷ್ಠ I5 ದಿನಗಳು ಮನೆಯಲ್ಲಿ ಮತ್ತು ಚಿಕಿತ್ಸೆಯ ಅವಧಿಯಲ್ಲಿ ಆಸ್ಪತ್ರೆಯಲ್ಲಿಯೇ ಪ್ರತ್ಯೇಕವಾಗಿ ಇರಬೇಕು.
- ಬಾವಲಿಗಳಿರುವ ಬಾವಿಯ ನೀರನ್ನು ಕುದಿಸದೆ ಉಪಯೋಗಿಸಬಾರದು. ಸೋಂಕಿತ ರೋಗಿಗಳನ್ನು ನಿರ್ವಹಿಸುವಾಗ ಆಸ್ಪತ್ರೆಯ ಸಿಬ್ಬಂದಿ ವಿಶೇಷ ಆರೈಕೆ ಬಳಕೆ ಮುಖವಾಡ ಮತ್ತು ಕೈಗವಸುಗಳನ್ನು ಉಪಯೋಗಿಸಬೇಕು.
ಏನು ಮಾಡಬೇಕು?:
- ಹಂದಿ ಕುದುರೆ, ನಾಯಿ ಮತ್ತು ಬೆಕ್ಕುಗಳಂತಹ ಸೋಂಕಿತ ಜಾನುವಾರುಗಳು ಮಧ್ಯಂತರ ಮೂಲಗಳಾಗಿರುವುದರಿಂದ ಇವುಗಳನ್ನು ಪ್ರತ್ಯೇಕವಾಗಿಡಿ.
- ಸೋಂಕು ತಗುಲಿರುವ ರೋಗಿಗಳನ್ನು ಪ್ರತ್ಯೇಕವಾಗಿ ಇಡಬೇಕು.
- ಶಂಕಿತರು ಬಳಸುವ ಬಟ್ಟೆ, ಪಾತ್ರೆಗಳು ಹಾಗೂ ಮುಖ್ಯವಾಗಿ ಸ್ನಾನ ಮತ್ತು ಶೌಚಾಲಯದಲ್ಲಿ ಬಳಸುವ ವಸ್ತುಗಳನ್ನು ಪ್ರತ್ಯೇಕವಾಗಿ ಶುಚಿಗೊಳಿಸಿ ಹಾಗೂ ಅವುಗಳ ನೈರ್ಮಲ್ಯ ನಿರ್ವಹಿಸುವುದು.
- ಹಸ್ತಲಾಘವ ಮಾಡುವುದು ತಪ್ಪಿಸಿ, ಸೋಂಕಿತ ಜನರ ಸಂಪರ್ಕಕ್ಕೆ ಬಂದ ನಂತರ ಕೈಗಳನ್ನು ಸರಿಯಾಗಿ ತೊಳೆದುಕೊಳ್ಳಿ.
- ರೋಗಿಗಳನ್ನು ಉಪಚರಿಸುವಾಗ ಮಾಸ್ಕ್ ಮತ್ತು (ಗೌಸ್) ಕೈಗವಸು ಧರಿಸಿ.
- ಫ್ಲೂ-ರೀತಿಯ ಲಕ್ಷಣಗಳು ಕಂಡು ಬಂದರೆ ಆಸ್ಪತ್ರೆಗೆ ತಕ್ಷಣ ಭೇಟಿ ನೀಡಿ.
- ನೆರವಿಗಾಗಿ ಸಹಾಯವಾಣಿ ಸಂಖ್ಯೆ 104ಕ್ಕೆ ಕರೆ ಮಾಡಿ.
ಇದನ್ನು ಮಾಡಬೇಡಿ:
ಪ್ರಾಣಿಗಳು ಮತ್ತು ಪಕ್ಷಿಗಳು ಕಚ್ಚಿರುವ ಹಣ್ಣುಗಳನ್ನು ತಿನ್ನಬೇಡಿ.
ಬಾವಲಿಗಳು ಅತಿ ಹೆಚ್ಚಾಗಿ ಕಂಡು ಬರುವ ಪ್ರದೇಶಗಳಿಂದ ಸಂಗ್ರಹಿಸಿದ ನೀರು ಕುಡಿಯಬೇಡಿ.
ಸೋಂಕಿತ ಪ್ರದೇಶಗಳಿಗೆ ಭೇಟಿ ನೀಡುವಾಗ ಪ್ರತಿಬಂಧಕ ಉಪಾಯಗಳನ್ನು ಕೈಗೊಳ್ಳಬೇಕು.
ರೋಗಿಯ ಶರೀರಸ್ರಾವದೊಂದಿಗೆ (ಜೊಲ್ಲು, ಬೆವರು, ಮೂತ್ರ ಇತ್ಯಾದಿ) ಸಂಪರ್ಕ ತಪ್ಪಿಸಿ.
ಇದನ್ನೂ ಓದಿ: Nipah virus: ಗುಂಡ್ಲುಪೇಟೆ ಮೂಲೆಹೊಳೆ ಚೆಕ್ಪೋಸ್ಟ್ನಲ್ಲಿ ಅಲರ್ಟ್, ಮನೆ-ಮನೆ ಸರ್ವೇ ಶೀಘ್ರ