ಮಂಗಳೂರು: ಕಾರವಾರ ಮೂಲದ ವ್ಯಕ್ತಿಯೊಬ್ಬನು ಸ್ವಯಂ ಆಗಿ ತನಗೆ ನಿಫಾ ಇರಬಹುದು ಎಂದು ಹೇಳಿದ್ದು ಬಿಟ್ಟರೆ, ನಿಫಾಕ್ಕೆ ಸಂಬಂಧಿಸಿದ ಯಾವುದೇ ಲಕ್ಷಣಗಳು ಆತನಲ್ಲಿ ಕಾಣಿಸಿಕೊಂಡಿಲ್ಲ. ಆದರೂ ಆತನ ಸ್ವ್ಯಾಬ್ ಮಾದರಿಯನ್ನು ಬೆಂಗಳೂರು ಮೂಲಕ ಪುಣೆಯ ಲ್ಯಾಬ್ಗೆ ಕಳುಹಿಸಿಕೊಡಲಾಗಿದೆ. ಒಂದು ದಿನದೊಳಗೆ ಬರುವ ಸಾಧ್ಯತೆ ಇದೆ ಎಂದು ದ.ಕ.ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾತನಾಡಿದ ಅವರು, ಆ ವ್ಯಕ್ತಿ ಕೆಲಸ ಮಾಡುವ ಸಂಸ್ಥೆಯಲ್ಲಿ ವಿಚಾರಿಸಿದಾಗ ಅಲ್ಲಿಯೂ ಯಾರೂ ಸೋಂಕಿತರಿಲ್ಲ ಎಂಬ ಮಾಹಿತಿ ದೊರಕಿದೆ. ಈ ಬಗ್ಗೆ ಯಾವುದೇ ಭಯ ಇಲ್ಲ ಎಂದು ಹೇಳಿದರೂ, ಈ ವ್ಯಕ್ತಿ ಫೋಬಿಯಾದಿಂದ ಬಹಳ ದೃಢವಾಗಿ ನಿಫಾ ಇರುವ ಶಂಕೆ ವ್ಯಕ್ತಪಡಿಸಿರುವುದರಿಂದ ಜಿಲ್ಲಾಡಳಿತ ನಿರ್ಲಕ್ಷ್ಯ ಮಾಡದೇ ಅವರ ಮಾದರಿಯನ್ನು ಬೆಂಗಳೂರು ಮೂಲಕ ಪುಣೆಯ ಲ್ಯಾಬ್ಗೆ ಕಳುಹಿಸಿಕೊಟ್ಟಿದೆ ಎಂದರು.
ಇದನ್ನೂ ಓದಿ:ನಿಫಾ ವೈರಸ್ ಶಂಕೆ.. ಸ್ವಇಚ್ಛೆಯಿಂದ ಬಂದು ಪರೀಕ್ಷೆ ಮಾಡಿಸಿಕೊಂಡ ವ್ಯಕ್ತಿ
ಕಾರವಾರ ಮೂಲದ ಈ ವ್ಯಕ್ತಿ ಆರ್ಟಿಪಿಸಿಆರ್ ಕಿಟ್ ತಯಾರಿಕಾ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಹಿಂದೆ ಆರ್ಟಿಪಿಸಿಆರ್ಗೆ ಸಂಬಂಧಿಸಿದ ಕಿಟ್ ತಯಾರಿಕೆಯಲ್ಲಿ ತೊಡಗಿದ್ದರೆ, ಈಗ ನಿಫಾ ಸೋಂಕಿಗೆ ಸಂಬಂಧಿಸಿದ ಕಿಟ್ ತಯಾರಿಕೆಯಲ್ಲಿ ತೊಡಗಿಸಿದ್ದರು.
ಅಲ್ಲಿ ಸಕ್ರಿಯ ಸೋಂಕು ಜೀವಾಣುಗಳನ್ನು ಬಳಸಿ ಕೆಲಸ ನಿರ್ವಹಿಸುತ್ತಿದ್ದರೂ, ಅಲ್ಲಿ ಕೆಲಸ ಮಾಡುವಾಗ ಎಲ್ಲ ಸ್ವಯಂ ರಕ್ಷಕ ಸಾಧನವನ್ನು ಧರಿಸಿಯೇ ಕೆಲಸ ಮಾಡುತ್ತಿದ್ದರು. ಆದರೂ ಆತ ಯಾವುದೇ ನಿಫಾ ಸೋಂಕಿತರ ಸಂಪರ್ಕಕ್ಕೂ ಬಂದಿಲ್ಲ. ಅಲ್ಲದೇ ಆತನಲ್ಲಿ ನಿಫಾದ ಯಾವುದೇ ಲಕ್ಷಣಗಳು ಕಂಡು ಬಂದಿಲ್ಲ. ಹಾಗಾಗಿ ಆತನನ್ನು ಶಂಕಿತ ಎನ್ನಲು ಸಾಧ್ಯವಿಲ್ಲ ಎಂದು ಜಿಲ್ಲಾಧಿಕಾರಿ ಹೇಳಿದರು.
ಪರ್ಸನಲ್ ಫೋಬಿಯಾದಿಂದ ಆಸ್ಪತ್ರೆಗೆ
ಆ ವ್ಯಕ್ತಿ ಹಬ್ಬಕ್ಕೆಂದು ಊರಿಗೆ ಬಂದಿದ್ದಾಗ ಮಳೆಯಲ್ಲಿ ನೆನೆದಿದ್ದಾರೆ. ಆಗ ಜ್ವರ ಕಾಣಿಸಿಕೊಂಡಿದೆ. ಅದರ ಲಕ್ಷಣಗಳು ನೋಡಿ ಗೂಗಲ್ ಸರ್ಚ್ ಮಾಡಿದ್ದಾರೆ. ಇದರಿಂದ ಅವರು ನಿಫಾ ಇರಬಹುದೆಂಬ ಪರ್ಸನಲ್ ಫೋಬಿಯಾದಿಂದ ಆಸ್ಪತ್ರೆಗೆ ಹೋಗಿದ್ದಾರೆ. ಅಲ್ಲಿಂದ ಅವರು ವೆನ್ಲಾಕ್ಗೆ ದಾಖಲಾಗಿದ್ದಾರೆ.
ಅವರನ್ನು ಐಸೋಲೇಷನ್ ಮಾಡಲಾಗಿದೆ. ಅವರಿಗೆ ಮಾಮೂಲಿ ಜ್ವರ ಹಾಗೂ ತಲೆನೋವು ಕಾಣಿಸಿಕೊಂಡಿದೆ. ಅಲ್ಲದೇ ಹೃದಯ ಬಡಿತವೂ ಜಾಸ್ತಿಯಾಗಿದೆ. ಇದು ಆತನೊಳಗಿನ ಭಯದಿಂದ ಇರಬಹುದು. ಆದರೆ, ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡದ ಕಾರಣ ಎಚ್ಚರ ವಹಿಸಿದ್ದೇವೆ.
ಆದ್ದರಿಂದ ಆತನ ಸಂಪರ್ಕಕ್ಕೆ ಬಂದಿರುವ ಎಲ್ಲರ ಮೇಲೂ ನಿಗಾ ಇರಿಸಲಾಗಿದೆ. ಅದಕ್ಕಾಗಿ ಉಡುಪಿ ಹಾಗೂ ಕಾರವಾರದ ಜಿಲ್ಲಾಡಳಿತಕ್ಕೂ ಈ ಬಗ್ಗೆ ಮಾಹಿತಿ ಕೊಡಲಾಗಿದೆ ಎಂದು ಡಿಸಿ ಹೇಳಿದ್ದಾರೆ.
ಎಲ್ಲ ಎಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ; ಡಿಸಿ
ಆದರೂ ಎಚ್ಚರಿಕೆಯಿಂದ ಇರುವ ಕಾರಣಕ್ಕೆ ಗಡಿ ಭಾಗಗಳಲ್ಲಿ ಥರ್ಮಲ್ ಸ್ಕ್ಯಾನರ್ ಇಲ್ಲದ ಕಡೆಗಳಲ್ಲಿ ಅದನ್ನು ಅಳವಡಿಸಲಾಗಿದೆ. ಅಲ್ಲದೇ ಯಾವುದೇ ರೀತಿಯ ಸೋಂಕಿನ ಲಕ್ಷಣಗಳು ಕಂಡು ಬಂದರೂ ಸೂಕ್ತವಾದ ರೀತಿಯ ತಪಾಸಣೆ ಮಾಡಲು ಎಲ್ಲ ಖಾಸಗಿ ಆಸ್ಪತ್ರೆಯ ವೈದ್ಯರಿಗೂ ಸೂಚನೆ ನೀಡಲಾಗಿದೆ.
ನಿಫಾ ಬಾವಲಿ ಮುಖೇನ ಬರುವುದರಿಂದ ಹಣ್ಣು-ಹಂಪಲು ಬಗ್ಗೆ ನಾಗರಿಕರು ಎಚ್ಚರಿಕೆಯಿಂದ ಇರಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ಸೂಚನೆ ನೀಡಿದ್ದಾರೆ.