ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ವಿಧಿಸಲಾಗಿದ್ದ, ರಾತ್ರಿ ನಿರ್ಬಂಧವನ್ನು ಮತ್ತೆ ಎರಡು ದಿನಗಳವರೆಗೆ ವಿಸ್ತರಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಆದೇಶಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಣಿ ಹತ್ಯೆಗಳು ನಡೆದ ಬಳಿಕ ಶುಕ್ರವಾರದಿಂದ ಮೂರು ದಿನಗಳವರೆಗೆ ರಾತ್ರಿ ನಿರ್ಬಂಧ ಹೇರಲಾಗಿತ್ತು. ಅದರಂತೆ ಸಂಜೆ 6 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಅಂಗಡಿ ಮುಂಗಟ್ಟುಗಳ ಬಂದ್ಗೆ ಆದೇಶಿಸಲಾಗಿತ್ತು.
ಈ ಆದೇಶ ನಾಳೆ ( ಸೋಮವಾರ) ಬೆಳಗ್ಗೆ ಮುಕ್ತಾಯ ವಾಗಬೇಕಿತ್ತು. ಇದೀಗ ಈ ಆದೇಶವನ್ನು ಮತ್ತೆರಡು ದಿನಕ್ಕೆ ಮುಂದುವರಿಸಿ ದ.ಕ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಅದರಂತೆ ಬುಧವಾರ ಬೆಳಗ್ಗೆ 6 ಗಂಟೆಯವರೆಗೆ ಈ ಆದೇಶ ಇರಲಿದೆ. ಅದರ ಜೊತೆಗೆ ಮತ್ತೆ ಎರಡು ದಿನಗಳ ಕಾಲ (ಮಂಗಳವಾರ) ಮದ್ಯಮಾರಾಟವನ್ನು ನಿಷೇಧಿಸಲಾಗಿದೆ.
ಇದನ್ನೂ ಓದಿ: ಫಾಝಿಲ್ ಹತ್ಯೆ ಪ್ರಕರಣ: ಕೃತ್ಯಕ್ಕೆ ಬಳಸಿದ್ದ ಕಾರು ಪತ್ತೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ 10 ದಿನದಲ್ಲಿ 3 ಕೊಲೆಗಳು ನಡೆದಿವೆ. ಈ ಪ್ರಕರಣಗಳ ಬಳಿಕ ಉದ್ವಿಗ್ನತೆಯ ವಾತಾವರಣ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಡಿಸಿಯವರ ಅಧ್ಯಕ್ಷತೆಯಲ್ಲಿ ಶಾಂತಿ ಸಭೆ ನಡೆಯಿತು. ಇಂದು ಹತ್ಯೆಯಾದ ಪ್ರವೀಣ್ ಮನೆಗೆ ಕಾಂಗ್ರೆಸ್ ನಿಯೋಗ ಭೇಟಿ ನೀಡಿತ್ತು. ಅಲ್ಲದೇ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಪ್ರವೀಣ್ ನೆಟ್ಟಾರು ಮನೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.