ಸುಳ್ಯ (ದಕ್ಷಿಣ ಕನ್ನಡ) : ಕಾಡಾನೆಗಳು ನಾಡಿನತ್ತ ಹೆಜ್ಜೆ ಹಾಕಿ ಬೆಳೆಗಳನ್ನು ಧ್ವಂಸ ಮಾಡುತ್ತಿದ್ದು, ರಾಜ್ಯದ ಕೆಲವು ಪ್ರದೇಶಗಳಲ್ಲಿ ರೈತರು ಕಂಗಾಲಾಗಿದ್ದಾರೆ. ಸುಳ್ಯದ ಕೃಷಿಕರು ಇವುಗಳ ಹಾವಳಿ ತಡೆಗೆ ಸರಳ ಮತ್ತು ವಿನೂತನ ಪ್ರಯೋಗಕ್ಕೆ ಮುಂದಾಗಿದ್ದಾರೆ. ಆನೆ ಬರುವ ದಾರಿಯಲ್ಲಿ ಜೇನು ಪೆಟ್ಟಿಗೆಗಳನ್ನಿಟ್ಟು ಗಜಪಡೆಯನ್ನು ಹಿಮ್ಮೆಟ್ಟಿಸುವ ಮಾರ್ಗವಿದು.
ಸುಳ್ಯ ತಾಲೂಕಿನ ಮಂಡೆಕೋಲು, ಅಜ್ಜಾವರ, ಆಲೆಟ್ಟಿ ಮುಂತಾದ ಗ್ರಾಮಗಳ ಜನರು ಆನೆಗಳು ನೀಡುತ್ತಿರುವ ತೊಂದರೆಯಿಂದ ಹೈರಾಣಾಗಿದ್ದರು. ಆನೆ ಕಂದಕ, ಸೋಲಾರ್ ಬೇಲಿ, ಸಿಮೆಂಟ್ ಹಲಗೆ ಅಳವಡಿಕೆ.. ಹೀಗೆ ಹಲವು ತಂತ್ರಗಳನ್ನು ಅನುಷ್ಠಾನಗೊಳಿಸಿದ್ದಾರೆ. ಆದಾಗ್ಯೂ, ಯಾವುದೂ ಹೇಳಿಕೊಳ್ಳುವಷ್ಟು ಪರಿಣಾಮಕಾರಿಯಾಗಲಿಲ್ಲ.
ಈಶಾನ್ಯದಲ್ಲಿ ಯಶಸ್ವಿ: ದೇಶದ ಈಶಾನ್ಯ ಭಾಗದ ರಾಜ್ಯಗಳಾದ ಮೇಘಾಲಯ, ಅಸ್ಸಾಂನಲ್ಲಿ ಕೃಷಿಕರು ಕಾಡಾನೆ ಬರುವ ದಾರಿಯಲ್ಲಿ ಜೇನುಗೂಡುಗಳನ್ನಿಟ್ಟು ಯಶಸ್ವಿಯಾಗಿದ್ದರು. ಇದರ ಬಳಕೆಯನ್ನು ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ದೇವರಗುಂಡ ಭಾಗದ ತೋಟಗಳಲ್ಲಿ ಅನುಸರಿಸಲಾಗುತ್ತಿದೆ. ಇದಕ್ಕಾಗಿ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ವತಿಯಿಂದ ಮತ್ತು ದ.ಕ, ಉಡುಪಿ, ಸುಳ್ಯದ ಜೇನು ವ್ಯವಸಾಯಗಾರರ ಸಹಕಾರ ಸಂಘದ ನೇತೃತ್ವದಲ್ಲಿ ಕೇಂದ್ರ ಸರಕಾರದ 'ಹನಿಮಿಷನ್' ಯೋಜನೆಯಡಿ ರೈತರಿಗೆ ಜೇನುಕೃಷಿ ತರಬೇತಿ ನೀಡಲಾಗಿದೆ.
ಅರ್ಹ ರೈತರು ಜೇನು ಕೃಷಿ ಮಾಡಲು ತಲಾ 10 ಜೇನು ಸಾಕಾಣಿಕೆ ಪೆಟ್ಟಿಗೆಯನ್ನು ಜೇನು ಕುಟುಂಬ ಸಮೇತ ನೀಡಿ, ಪೆಟ್ಟಿಗೆಯನ್ನು ಕಾಡಾನೆಗಳು ಬರುವ ದಾರಿಯಲ್ಲಿ ಜೋಡಿಸುತ್ತಿದ್ದಾರೆ. ಒಂದೆಡೆ ಆನೆಗಳ ಹಾವಳಿ ತಪ್ಪುತ್ತದೆ. ಮತ್ತೊಂದೆಡೆ, ಕೃಷಿಯಲ್ಲಿ ಜೇನುನೊಣಗಳ ಪರಾಗಸ್ಪರ್ಶದಿಂದಾಗಿ ಹೆಚ್ಚುವರಿ ಇಳುವರಿ ಸಿಗುತ್ತದೆ. ಈ ಮೂಲಕ ಪ್ರಯೋಗ ರೈತರಿಗೆ ವರದಾನವಾಗುತ್ತದೆ ಎಂಬ ನಿರೀಕ್ಷೆ ಇದೆ.
ಹೇಗೆ ಸಹಕಾರಿ?: ಕಾಡಾನೆ ಬರುವ ತೋಟದ ಬದಿಯಲ್ಲಿ ಜೇನು ಪೆಟ್ಟಿಗೆಗಳನ್ನು ಸಾಲಾಗಿ ಇಡಲಾಗುತ್ತದೆ. ತಂತಿಗಳ ಮೂಲಕ ಪರಸ್ಪರ ಈ ಪೆಟ್ಟಿಗೆಗಳನ್ನು ಕಟ್ಟಬೇಕು. ಆನೆಗಳು ಬರುವಾಗ ಜೇನು ಪೆಟ್ಟಿಗೆಗೆ ಅಥವಾ ತಂತಿಗೆ ತಾಗಿದರೆ ಎಲ್ಲಾ ಪೆಟ್ಟಿಗೆಗಳು ಏಕಕಾಲಕ್ಕೆ ಅಲುಗಾಡಿ ಅದರಿಂದ ಜೇನು ನೊಣಗಳೆದ್ದು ಗುಂಪಾಗಿ ಗುಂಯ್‌ಗುಡುತ್ತವೆ. ಆ ಸದ್ದು ಆನೆಗಳಿಗೆ ಕಿರಿಕಿರಿ ಉಂಟು ಮಾಡುವುದರಿಂದ ಮತ್ತೆ ಆ ಕಡೆಗೆ ಅಥವಾ ಅದರಿಂದ ಮುಂದಕ್ಕೆ ಕಾಡಾನೆಗಳು ಚಲಿಸಲಾರವು. ಮಾತ್ರವಲ್ಲ, ಮುಂದಕ್ಕೆ ಇಂತಹ ಪೆಟ್ಟಿಗೆಗಳನ್ನು ಕಂಡಾಗಲೇ ಕಾಡಾನೆಗಳು ಹಿಂದೆ ಸರಿಯುತ್ತವೆ ಎಂಬುದು ಈ ಪ್ರಯೋಗದ ಉದ್ದೇಶ. ಜೇನು ಪೆಟ್ಟಿಗೆಗಳೊಂದಿಗೆ ಈ ಪ್ರದೇಶದಲ್ಲಿ ಸಿಸಿ ಕ್ಯಾಮರಾಗಳನ್ನೂ ಅಳವಡಿಸಿ ಕಾಡಾನೆಗಳ ಚಲನವಲನದ ಬಗ್ಗೆಯೂ ನಿಗಾವಹಿಸಲಾಗುತ್ತಿದೆ.
ಪ್ರತಿಕ್ರಿಯೆ: ಈಟಿವಿ ಭಾರತದ ಜೊತೆಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಅವರ ಸಂಬಂಧಿ ಬಾಲಚಂದ್ರ ದೇವರಗುಂಡ, "ನಮ್ಮಲ್ಲಿ ಜೇನು ಪೆಟ್ಟಿಗೆ ಜೋಡಿಸಿ ಕಾಡಾನೆ ಹಾವಳಿ ತಡೆಗೆ ಪ್ರಯತ್ನಿಸಲಾಗುತ್ತಿದೆ. ಇದು ರಾಜ್ಯದಲ್ಲೇ ಮೊದಲ ಪ್ರಯೋಗ. ಅಸ್ಸಾಂ, ಮೇಘಾಲಯದಲ್ಲಿ ಯಶಸ್ವಿಯಾಗಿದ್ದು, ಸುಳ್ಯದಲ್ಲಿಯೂ ಇಂಥದ್ದೊಂದು ಪ್ರಯೋಗ ಕಳೆದೊಂದು ವಾರದಿಂದ ಯಶಸ್ಸು ಕಾಣುತ್ತಿದೆ. ಇದರಿಂದ ಜೇನು ಕೃಷಿಯ ಆದಾಯದ ಜೊತೆಗೆ ಆನೆಗಳ ಹಾವಳಿ ತಪ್ಪುತ್ತದೆ. ಕೃಷಿಯಲ್ಲೂ ಜೇನುನೊಣಗಳ ಪರಾಗಸ್ಪರ್ಶದಿಂದಾಗಿ ಹೆಚ್ಚುವರಿ ಇಳುವರಿಗೆ ಪ್ರಯೋಗ ವರದಾನವಾಗಲಿದೆ" ಎಂದರು.
ಇದನ್ನೂ ಓದಿ: ಅಕ್ಕಿ ಮೇಲೆ ಆಸೆ, ಪಡಿತರ ಅಂಗಡಿ ಮೇಲೆ ದಾಳಿ: ಇಡುಕ್ಕಿಯಲ್ಲಿ ಮಾಲೀಕ, ಸ್ಥಳೀಯರಿಗೆ ಸಂಕಷ್ಟ