ಪುತ್ತೂರು ( ಮಂಗಳೂರು): ಕೊರೊನಾದಿಂದ ದೂರ ಉಳಿಯಬೇಕೆಂದರೆ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು ಹಾಗೂ ಕೈಗಳನ್ನು ಆಗಾಗ ತೊಳೆಯುವುದರಿಂದ ಸಾಧ್ಯ ಎನ್ನುವುದನ್ನು ವಿಶ್ವ ಆರೋಗ್ಯ ಸಂಸ್ಥೆಯ ಎಚ್ಚರಿಕೆಯಾಗಿದೆ.
ಕೈ ತೊಳೆಯುವ ವಿಧಾನದಲ್ಲೂ ಬದಲಾವಣೆಯ ಅಗತ್ಯವಿದೆ ಎನ್ನುವುದನ್ನು ಮನಗಂಡ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಬಾಲಕನೊಬ್ಬ ಸ್ಯಾನಿಟೈಸರ್ ಬಳಕೆಯ ಯಂತ್ರವೊಂದನ್ನು ತಯಾರಿಸಿದ್ದಾನೆ.
ಪುತ್ತೂರಿನ ನಿವಾಸಿ ಎಂಟನೇ ತರಗತಿಯ ವಿದ್ಯಾರ್ಥಿ ನಿಹಾಲ್ ಈ ಸಾಧನೆ ಮಾಡಿದ ಪೋರ. ಸ್ಯಾನಿಟೈಸರ್ಗಳನ್ನು ಬಹುತೇಕ ಎಲ್ಲಾ ಕಚೇರಿಗಳಲ್ಲಿ ಬಳಸುತ್ತಿದ್ದಾರೆ. ಇದಕ್ಕಾಗಿ ಕೆಲವು ಕಡೆಗಳಲ್ಲಿ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ. ಇಲ್ಲವೇ ಸ್ಯಾನಿಟೈಸರ್ ಅನ್ನು ಕಚೇರಿಯ ಬಾಗಿಲ ಬಳಿಯಿಟ್ಟು ಒಳ ಬರುವವರು ಅದನ್ನು ಹಾಕಿಕೊಳ್ಳಬೇಕಾದ ಅನಿವಾರ್ಯತೆಯಿದೆ. ಇದರಿಂದ ರೋಗಾಣು ಇತರರಿಗೂ ಹರಡುವ ಸಾಧ್ಯತೆ ಇದೆ. ಇದನ್ನು ಮನಗಂಡ ಈ ವಿದ್ಯಾರ್ಥಿ ಕಾಲಲ್ಲಿ ಒತ್ತಿ ಸ್ಯಾನಿಟೈಸರ್ ಬಳಸಬಹುದಾದ ಯಂತ್ರವನ್ನು ತಯಾರಿಸಿದ್ದಾನೆ.
ಸಾಮಾನ್ಯ ತಂತ್ರಜ್ಞಾನವನ್ನು ಬಳಸಿ ಈ ಯಂತ್ರವನ್ನು ನಿಹಾಲ್ ತಯಾರಿಸಿದ್ದಾನೆ. ಈ ಯಂತ್ರಗಳನ್ನು ಪುತ್ತೂರಿನ ಎಲ್ಲಾ ಸರ್ಕಾರಿ ಕಚೇರಿಗಳಿಗೆ ನೀಡುತ್ತಿದ್ದಾನೆ. ಯುಪಿವಿಸಿ ಪೈಪ್ ಮೂಲಕ ಈ ಯಂತ್ರ ತಯಾರಿಸಿದ್ದು, ಒಂದು ಯಂತ್ರಕ್ಕೆ ಸುಮಾರು 1,000 ದಿಂದ 1,500 ರೂ. ಖರ್ಚಾಗುತ್ತದೆ. ಆಸಕ್ತರಿಗೆ ಇದನ್ನು ಪೂರೈಸುವ ಇಚ್ಛೆಯನ್ನೂ ಹೊಂದಿದ್ದಾನೆ.