ದಕ್ಷಿಣಕನ್ನಡ: ಜಿಲ್ಲೆಯ ಸುಳ್ಯ ಹಾಗೂ ಕಡಬ ತಾಲೂಕಿನ ಹಲವಾರು ಗ್ರಾಮೀಣ ಭಾಗಗಳ ಮೊಬೈಲ್ ನೆಟ್ವರ್ಕ್ ಸಮಸ್ಯೆ ನಿವಾರಣೆಗೆ ಈಗಾಗಲೇ ಸಚಿವ ಎಸ್.ಅಂಗಾರ ನೇತೃತ್ವದಲ್ಲಿ ಹಲವು ಸಭೆಗಳು ನಡೆದಿದೆ. ಆದರೆ ಅಚ್ಚರಿ ಎಂದರೆ ಸಭೆ ನಡೆದ ಮರುದಿನವೇ ನೆಟ್ವರ್ಕ್ಗಳ ಸ್ಥಿತಿ ಮಾತ್ರ ಅದೇ ರಾಗ ಅದೇ ಹಾಡು ಎಂಬಂತಾಗಿದೆ. ಉದಾಹರಣೆಗೆ ಇದೀಗ ವಿದ್ಯಾರ್ಥಿನಿಯೊಬ್ಬರಿಗೆ ಮಳೆಯಲ್ಲಿ ತಂದೆ ಛತ್ರಿ ಹಿಡಿದು ಆನ್ಲೈನ್ ಕ್ಲಾಸಿಗೆ ಸಹಕಾರ ನೀಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈಗಾಗಲೇ ಕಡಬದ ಕೊಂಬಾರು ಎಂಬಲ್ಲಿ ರೇಷನ್ ವಿತರಣೆಗೆ ಸಿಬ್ಬಂದಿಗಳು ಲ್ಯಾಪ್‌ಟಾಪ್ ಹಿಡಿದು ಗುಡ್ಡ ಹತ್ತಿದ ವರದಿಯನ್ನು ಈಟಿವಿ ಭಾರತ ಪ್ರಸಾರ ಮಾಡಿತ್ತು.ಆದರೆ ಇಂದಿಗೂ ಕೊಂಬಾರು ಭಾಗದ ಈ ಸಮಸ್ಯೆ ಮಾತ್ರ ನಿವಾರಣೆ ಆಗಲಿಲ್ಲ. ಇದೀಗ ಮತ್ತೆ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರ, ಬಳ್ಳಕ್ಕ ಪ್ರದೇಶದ ವಿದ್ಯಾರ್ಥಿನಿಯೊಬ್ಬರು ಮಳೆಯ ನಡುವೆಯೇ ರಸ್ತೆ ಬದಿಗೆ ತಂದೆಯ ಜೊತೆಗೆ ಬಂದು ಕೊಡೆ ಹಿಡಿದು ಆನ್ ಲೈನ್ ಕ್ಲಾಸ್ ಕೇಳುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದೇ ತರಹ ಈ ಪ್ರದೇಶದಲ್ಲಿ ಹಲವಾರು ವಿದ್ಯಾರ್ಥಿಗಳು ನೆಟ್ವರ್ಕ್ ಸಮಸ್ಯೆ ಎದುರಿಸುತ್ತಿದ್ದಾರೆ. ತಮಗೆ ನೆಟ್ವರ್ಕ್ ಇಲ್ಲ, ಸಿಗ್ನಲ್ ಇಲ್ಲ ಎಂದು ಮನೆಯಲ್ಲೇ ಕೂತರೆ ತಮ್ಮ ಭವಿಷ್ಯವೇ ಹಾಳಾಗುತ್ತದೆ ಎನ್ನುತ್ತಾರೆ ವಿದ್ಯಾರ್ಥಿಗಳ ಪೋಷಕರು.
ಈಗಾಗಲೇ ಕೊರೊನಾ ರೋಗವು ಮಕ್ಕಳ ಭವಿಷ್ಯವನ್ನೇ ಬಹುತೇಕ ಹಾಳು ಮಾಡಿದೆ. ಈ ವಿದ್ಯಾರ್ಥಿನಿಯು ತಂದೆಯ ಜೊತೆಗೆ ರಸ್ತೆಗೆ ಬಂದು ಮಳೆಯ ನಡುವೆಯೇ ಪಾಠ ಕೇಳುತ್ತಿದ್ದಾಳೆ ಹಾಗೂ ತನಗೆ ಓದಲು ಬೇಕಾದ ಪಠ್ಯವನ್ನು ಡೌನ್ ಲೋಡ್ ಮಾಡಿಕೊಳ್ಳುತ್ತಾಳೆ.ಇದು ಇವಳ ಮಾತ್ರ ಸಮಸ್ಯೆ ಅಲ್ಲ ಇದೇ ಪ್ರದೇಶದ ಸುಮಾರು 20ಕ್ಕೂ ಹೆಚ್ಚಿನ ಮಕ್ಕಳು ಹೀಗೇ ಪಾಠ ಕೇಳಲು ಗುಡ್ಡದ ತುದಿಗೆ ಹಾಗೂ ರಸ್ತೆಯ ಬದಿಗೆ ಬರುತ್ತಾರೆ ಎನ್ನಲಾಗಿದೆ.
ಇನ್ನು ಸರಕಾರ ಹಾಗೂ ಜನಪ್ರತಿನಿಧಿಗಳು ಆಗಾಗ ಬಂದು ಗ್ರಾಮೀಣ ಭಾಗದ ನೆಟ್ವರ್ಕ್ ಸಮಸ್ಯೆ ನಿವಾರಣೆಗೆ ಬೊಬ್ಬೆ ಹೊಡೆಯುತ್ತಾರೆ. ತಕ್ಷಣವೇ ಗ್ರಾಮೀಣ ಭಾಗಗಳ ನೆಟ್ವರ್ಕ್ ಸಮಸ್ಯೆ ನಿವಾರಣೆಯಾಗಬೇಕು ಎಂದು ಹೇಳುತ್ತಾರೆ.
ಅದಾದ ಬಳಿಕ ಪರಿಸ್ಥಿತಿ ಮಾತ್ರ ಯಥಾಸ್ಥಿತಿಯಲ್ಲೇ ಮುಂದುವರೆಯುತ್ತದೆ. ಜನರು ಮನವಿ ನೀಡಿದಾಕ್ಷಣ ಭರವಸೆ ನೀಡುತ್ತಾರೆ, ಅಲ್ಲಿಗೆ ಆ ಕತೆಯೂ ಮುಗಿಯಿತು.ಈಗಾಗಲೇ ನೆಟ್ವರ್ಕ್ ಸುಧಾರಣೆಗಾಗಿ ಮಾನ್ಯ ಪ್ರಧಾನಿಗಳವರೆಗೆ ಪತ್ರ ಬರೆದು ಹಿಂಬರಹ ಬಂದಿತ್ತು ವಿನಃ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಸಾರ್ವಜನಿಕರು.
ಜನಪ್ರತಿನಿಧಿಗಳು ಈ ಬಗ್ಗೆ ತಾಂತ್ರಿಕ ಸಲಹೆ ಪಡೆದು ಕೆಲಸ ಮಾಡಿದರೆ ಯಶಸ್ಸು ಸಾಧ್ಯವಿದೆ ಎಂಬುದು ಇವರ ಅಭಿಪ್ರಾಯ.