ಮಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ಬಳಿಕ ದೇಶದಲ್ಲಿ ಹಿಂಸಾಚಾರ ನಡೆಯುತ್ತಿದೆ. ಆರು ಜೀವಗಳು ಗೋಲಿಬಾರ್‌ಗೆ ಬಲಿಯಾಗಿವೆ. ಪ್ರಧಾನಿ ಮೋದಿ ಮತ್ತು ಗೃಹಸಚಿವ ಅಮಿತ್ ಶಾ ಗುಜರಾತ್‌ನಲ್ಲಿ ಪಡೆದ ತರಬೇತಿಯನ್ನು ಇಡೀ ದೇಶಕ್ಕೆ ಹಬ್ಬಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ಆರೋಪಿಸಿದ್ದಾರೆ.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಸ್ಲಿಂ ಸಮುದಾಯವನ್ನು ಹೊರಗಿಟ್ಟು ಈ ಪೌರತ್ವ ಕಾಯ್ದೆ ತಿದ್ದುಪಡಿ ಮಾಡಿದ್ದು, ಇದು ಇಡೀ ದೇಶದಲ್ಲಿ ಬೆಂಕಿ ಹಬ್ಬಲು ಕಾರಣವಾಗಿದೆ. ದೇಶದಲ್ಲಿ ಜಾತಿ ಕಂದಕ ಏರ್ಪಡಿಸಿ ಹಿಂಸೆ ಮಾಡಲು ಪ್ರಚೋದಿಸುತ್ತಿದ್ದಾರೆ. ಒಂದೆಡೆ ದೇಶದಲ್ಲಿ ಹಿಂಸಾಚಾರ ನಡೆದು ಹೊತ್ತಿ ಉರಿಯುತ್ತಿದ್ದರೆ, ಪ್ರಧಾನಿ ಮೋದಿ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದಾರೆ. ಇದು ಜನರ ಬಗ್ಗೆ ಇರುವ ಕಾಳಜಿ ತೋರಿಸುತ್ತಿದೆ ಎಂದು ಆಪಾದಿಸಿದರು.
ಇಷ್ಟೆಲ್ಲಾ ಪ್ರತಿಭಟನೆ ನಡೆಯುತ್ತಿದ್ದರೂ ಯಾಕೆ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಕೇಳುವ ಸೌಜನ್ಯವಿಲ್ಲ. ಕೇಂದ್ರ ಸರ್ಕಾರ ಪ್ರಜಾಪ್ರಭುತ್ವಕ್ಕೆ ದೊಡ್ಡ ಧಕ್ಕೆ ತಂದಿದೆ. ಕೇಂದ್ರ ಅಧಿಕಾರದ ದುರುಪಯೋಗ ಮಾಡುತ್ತಿರುವುದು ದೇಶದ ದುರಾದೃಷ್ಟ ಎಂದರು.