ಮಂಗಳೂರು: ಬಿಜೆಪಿ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಈ ರೀತಿಯ ಯಾವುದೇ ಚಟುವಟಿಕೆಗಳು ನಡೆದಿಲ್ಲ. ಯಡಿಯೂರಪ್ಪನವರ ಸರ್ಕಾರ ಸುಭದ್ರವಾಗಿದ್ದು, ಅವರ ನೇತೃತ್ವದಲ್ಲಿ ಎಲ್ಲರೂ ಒಂದಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ದ.ಕ. ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿ ಮಾತನಾಡಿದ ಅವರು, ಎಲ್ಲಾ ಶಾಸಕರು ಒಟ್ಟಾಗಿ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಮಾತುಕತೆ ನಡೆಸುತ್ತಿದ್ದಾರೆ. ಕೆಲವು ಶಾಸಕರು ಅಭಿವೃದ್ಧಿ ದೃಷ್ಟಿಯಿಂದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪಕ್ಷದ ಸಂಘಟನೆಯ ದೃಷ್ಟಿಯಿಂದ ಮಾತುಕತೆ ನಡೆಸಲಾಗಿದೆ ಎಂದರು.
ರಾಜ್ಯಧ್ಯಕ್ಷನಾಗಿ ನಾನು ಗಮನಿಸುವ ಹಾಗೆ ಪಕ್ಷದೊಳಗೆ ಯಾವುದೇ ಭಿನ್ನಾಭಿಪ್ರಾಯದ ಚಟುವಟಿಕೆಗಳು ನಡೆಯುತ್ತಿಲ್ಲ. ಪಕ್ಷದಲ್ಲಿ ಯಾವುದೇ ಅಶಿಸ್ತನ್ನು ನಾವು ಸಹಿಸೋದಿಲ್ಲ. ಅಶಿಸ್ತು ಕಂಡುಬಂದಲ್ಲಿ ಪಕ್ಷದ ಹೈಕಮಾಂಡ್ ಶಿಸ್ತು ಕ್ರಮ ಕೈಗೊಳ್ಳುತ್ತದೆ ಎಂದರು.
ಬಿಜೆಪಿಯಲ್ಲಿ ಭಿನ್ನಾಭಿಪ್ರಾಯ ವ್ಯಕ್ತವಾಗಿದೆ ಎಂದು ಡಿ.ಕೆ. ಶಿವಕುಮಾರ್ ಅವರು ಹಗಲುಗನಸು ಕಾಣುತ್ತಿದ್ದಾರೆ. ಎಲ್ಲಾ ಶಾಸಕರು ಕೋವಿಡ್ ಸೋಂಕಿನ ವಿರುದ್ಧ ಹೋರಾಟದಲ್ಲಿ ಸದಾ ಪರಿಶ್ರಮ ವಹಿಸುತ್ತಿದ್ದಾರೆ. ಆದ್ದರಿಂದ ನಮ್ಮ ಸರ್ಕಾರ ಸುಭದ್ರವಾಗಿದ್ದು, ಪೂರ್ಣಾವಧಿ ಆಡಳಿತ ನಡೆಸಲಿದೆ. ಯಡಿಯೂರಪ್ಪನವರೇ ಪೂರ್ಣಾವಧಿ ಸಿಎಂ ಆಗಲಿದ್ದಾರೆ ಎಂದು ನಳಿನ್ ಕುಮಾರ್ ಸ್ಪಷ್ಟಪಡಿಸಿದರು.