ಮಂಗಳೂರು: ಪಿಎಫ್ಐಯ ಭಯೋತ್ಪಾದಕರನ್ನು ಸಿದ್ದರಾಮಯ್ಯ ಸರ್ಕಾರ ಜೈಲಿನಿಂದ ಬಿಡುಗಡೆ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪಿಸಿದರು. ಉಡುಪಿಯ ಪ್ರಕರಣ ವಿರೋಧಿಸಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿಯಿಂದ ಬೃಹತ್ ಪ್ರತಿಭಟನೆ ಮತ್ತು ಸಮಗ್ರ ತನಿಖೆಗೆ ಹಕ್ಕೊತ್ತಾಯಕ್ಕೆ ಆಗ್ರಹಿಸಿ ನಗರದ ಪುರಭವನದ ಮುಂಭಾಗ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಈ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗುತ್ತಿದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸರ್ಕಾರ ವಿಫಲವಾಗಿದೆ. ಮುಖ್ಯಮಂತ್ರಿ ಮಾತ್ರವಲ್ಲ, ಈ ರಾಜ್ಯದ ಗೃಹ ಸಚಿವರೂ ಕಾನೂನು ಸುವ್ಯವಸ್ಥೆ ಕಾಪಾಡಲು ವಿಫಲವಾಗಿದ್ದಾರೆ. ಗೃಹ ಸಚಿವರು ಉಡುಪಿ ಪ್ರಕರಣವನ್ನು ಮಕ್ಕಳಾಟ ಎಂದು ಹೇಳುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಜಿಹಾದಿಗಳು ತಲೆಯೆತ್ತಿದ್ದಾರೆ. ಆದ್ದರಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೆಯೋ, ಜಿಹಾದಿ ಸರ್ಕಾರ ಇದೆಯೋ ಎಂಬ ಸಂಶಯ ಮೂಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಿಡಿಕಾರಿದರು.
ಉಡುಪಿ ಪ್ರಕರಣ ಒಂದು ದಿನದ ಘಟನೆಯಲ್ಲ. ಆರೇಳು ಬಾರಿ ಇಂತಹ ಘಟನೆ ನಡೆದಿದೆ. ಈ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ಪೊಲೀಸ್ ಇಲಾಖೆಯಿಂದ ಆಗುತ್ತಿದೆ. ಸಿದ್ದರಾಮಯ್ಯ ಸರ್ಕಾರಕ್ಕೆ ಕೊಲೆಗಡುಕರನ್ನು ಜೈಲಿಗೆ ಕಳುಹಿಸುವ ತಾಕತ್ತಿಲ್ಲ. ಆದರೆ ಟ್ವೀಟ್ ಮಾಡಿದ ರಾಷ್ಟ್ರಭಕ್ತೆಯನ್ನು ಜೈಲಿಗಟ್ಟುವ ಸರ್ಕಾರ ಇದಾಗಿದೆ. ಇದೀಗ ಇಡೀ ರಾಜ್ಯದಲ್ಲಿ ಜನರು ಭೀತಿಗೊಳಗಾಗುತ್ತಿದ್ದಾರೆ ಎಂದು ಕಟೀಲ್ ಹೇಳಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಬೆಳಗಾವಿ, ಉತ್ತರ ಕನ್ನಡದಲ್ಲಿ ಆದ ವಿಜಯೋತ್ಸವದಲ್ಲಿ ಪಾಕಿಸ್ತಾನಕ್ಕೆ ಜಿಂದಾಬಾದ್ ಎಂದು ಘೋಷಣೆ ಕೂಗಿದ ರಾಷ್ಟ್ರ ವಿರೋಧಿಗಳನ್ನು ಇಂದಿನವರೆಗೆ ಬಂಧಿಸುವ ಕಾರ್ಯ ಕಾಂಗ್ರೆಸ್ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಸಿದ್ದರಾಮಯ್ಯರಿಗೆ ತಾಕತ್ತಿದ್ದರೆ ಆ ರಾಷ್ಟ್ರ ವಿರೋಧಿಗಳನ್ನು ಜೈಲಿಗಟ್ಟಲಿ. ಇಲ್ಲದಿದ್ದಲ್ಲಿ ಅವರನ್ನು ನಿಮ್ಮ ಕಾಂಗ್ರೆಸ್ ಕಾರ್ಯಕರ್ತರೆಂದು ಒಪ್ಪಿಕೊಳ್ಳಿ ಎಂದು ನಳಿನ್ ಕುಮಾರ್ ಕಟೀಲ್ ಆಗ್ರಹಿಸಿದರು.
ಇನ್ನು, ಮಾಜಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಮಾತನಾಡಿ, ಸಿದ್ದರಾಮಯ್ಯ ಎಲ್ಲಾ ಟೋಪಿ ಹಾಕ್ತಾರೆ, ಆದರೆ ಕೇಸರಿ ಟೋಪಿ ಯಾಕೆ ಬೇಡ ಅಂದ್ರಿ?. ಸಿದ್ದರಾಮಯ್ಯ ಸರ್ಕಾರದಲ್ಲಿ ಎಲ್ಲರೂ ಸಮಾನರು. ಆದ್ರೆ ಹಿಂದೂಗಳು ಕಡಿಮೆ ಸಮಾನರಾ?. ಉಡುಪಿ ಪ್ರಕರಣ ಒಂದು ದಿನದ ಘಟನೆಯಲ್ಲ ನಿರಂತರವಾಗಿ ಇಂತಹ ಘಟನೆಗಳು ನಡೆಯುತ್ತಿವೆ. ಮುಖ್ಯಮಂತ್ರಿ, ಗೃಹ ಸಚಿವರು ತಕ್ಷಣ ಇದನ್ನು ತನಿಖೆ ಮಾಡಿಸಬೇಕು ಎಂದು ಒತ್ತಾಯಿಸಿದರು.
ಗೃಹ ಸಚಿವರು ಹೇಳ್ತಾರೆ ಇದು ತಮಾಷೆಗೆ ಮಾಡಿದ್ದು ಅಂತ. ಈಗ ಬೆಳ್ಳಿಯಪ್ಪ ತನಿಖಾಧಿಕಾರಿ. ನಮಗೆ ತನಿಖಾಧಿಕಾರಿ ಮೇಲೆ ಸಂಶಯವಿಲ್ಲ, ಸರ್ಕಾರದ ಮೇಲೆ ಸಂಶಯ. ಸಿದ್ದರಾಮಯ್ಯ ನಾಳೆ ಉಡುಪಿಗೆ ಬರ್ತಾಯಿದ್ದಿರಿ, ಈ ಪ್ರಕರಣವನ್ನು ಎಸ್ಐಟಿ ಒಪ್ಪಿಸುತ್ತೇನೆ ಎಂದು ಹೇಳಿದರೆ, ನಾವು ಸ್ವಾಗತ ಮಾಡುತ್ತೇವೆ. ಸದ್ಯ ಮನೆಯಿಂದ ಹೊರಗೆ ಹೋದ ಹುಡುಗಿ ವಾಪಸ್ ಬರ್ತಾಳೆ ಎಂಬ ನಂಬಿಕೆ ಇಲ್ಲ ಎಂದು ಪೂಜಾರಿ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: BJP: 3 ಪ್ರಮುಖ ಹುದ್ದೆಗಳಿಗೆ ನೇಮಕಾತಿ: ಲಿಂಗಾಯತ, ಒಕ್ಕಲಿಗ, ಹಿಂದುಳಿದ ಜಾತಿ ಸಮೀಕರಣಕ್ಕೆ ಮುಂದಾಯ್ತಾ ಬಿಜೆಪಿ?