ಮಂಗಳೂರು: ಪಾದರಾಯನಪುರದ ಕಾನೂನು ಭಂಜಕರ ಮೇಲೆ ಕಠಿಣ ಕ್ರಮ ಕೈಗೊಂಡ ರೀತಿಯಲ್ಲಿ ಅಲ್ಲಿನ ಶಾಸಕ ಜಮೀರ್ ಅಹ್ಮದ್ ಅವರ ಮೇಲೆಯೂ ಕೇಸು ದಾಖಲಿಸಿ ಗೂಂಡಾ ಕಾಯ್ದೆಯಡಿ ಬಂಧಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸರ್ಕಾರವನ್ನು ಒತ್ತಾಯಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ತಮ್ಮ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ನಳಿನ್ ಕುಮಾರ್ ಕಟೀಲ್, ಜಮೀರ್ ಅಹ್ಮದ್ ಹತ್ತಾರು ಬಾರಿ ರಾಷ್ಟ್ರದ್ರೋಹಿ ಹೇಳಿಕೆ ನೀಡುತ್ತಾ ಬಂದಿದ್ದಾರೆ. ಓರ್ವ ಶಾಸಕನಾಗಿ ಕಾಂಗ್ರೆಸ್ ಪಕ್ಷಕ್ಕೂ ಅವಮಾನ ಮಾಡಿದ್ದಾರೆ. ಹಾಗಾಗಿ ಕಾಂಗ್ರೆಸ್ ಪಕ್ಷ ಅವರನ್ನು ಪಕ್ಷದಿಂದ ಹಾಗೂ ಶಾಸಕ ಸ್ಥಾನದಿಂದ ಉಚ್ಛಾಟನೆ ಮಾಡಲಿ ಎಂದು ಒತ್ತಾಯಿಸಿದರು.
ಪಾದರಾಯನಪುರದಲ್ಲಿ ಗೂಂಡಾಗಿರಿ ವರ್ತನೆ ತೋರಿರುವವರ ಪರವಾಗಿ ನಿಂತಿರುವ ಅಲ್ಲಿನ ಶಾಸಕ ಜಮೀರ್ ಅಹ್ಮದ್ ತೆಗೆದುಕೊಂಡಿರುವ ನಿರ್ಧಾರ ಹಾಗೂ ವರ್ತನೆ ಕಾನೂನು ವಿರೋಧಿ ಮತ್ತು ಸಮಾಜ ವಿರೋಧಿಯಾಗಿದೆ. ಅಲ್ಲದೆ ಅಧಿಕಾರಿಗಳಿಗೆ ತನ್ನ ಒಪ್ಪಿಗೆ ಪಡೆದೇ ಬರಬೇಕು ಎಂದು ಹೇಳಿರೋದು ಸರ್ವಾಧಿಕಾರಿ ಧೋರಣೆಯಾಗಿದೆ. ವೀಸಾ ಅವಧಿ ಮುಗಿದ 14 ಮಂದಿ ಇನ್ನೂ ಪಾದರಾಯನಪುರದಲ್ಲಿದ್ದಾರೆ. ಇವರೆಲ್ಲರೂ ಜಮೀರ್ ಅಹ್ಮದ್ ಅವರ ಶಿಫಾರಸು ಮೇರೆಗೆ ಇದ್ದಾರೆಯೇ?, ಅವರನ್ನು ಜಮೀರ್ ಅಹ್ಮದ್ ರಕ್ಷಣೆ ಮಾಡುತ್ತಿದ್ದಾರೆಯೇ? ಅಲ್ಲಿ ಉಳಿಸುವ ಕಾರ್ಯವನ್ನು ಮಾಡಲಾಗುತ್ತಿದೆಯೇ ಎನ್ನುವುದಕ್ಕೆ ಜಮೀರ್ ಅಹ್ಮದ್ ಉತ್ತರ ಕೊಡಬೇಕು ಎಂದು ನಳಿನ್ ಕುಮಾರ್ ಆಗ್ರಹಿಸಿದರು.
ಪಾದರಾಯನಪುರದಲ್ಲಿ ಕೋವಿಡ್ ಪರೀಕ್ಷೆಗೆ ತೆರಳಿದ ಸಂದರ್ಭ ಸರ್ಕಾರಿ ಅಧಿಕಾರಿಗಳ ಮೇಲೆ ಹಲ್ಲೆ ಮಾಡಿರೋದು ಗೂಂಡಾಗಿರಿ ಪ್ರವರ್ತನೆಯಾಗಿದೆ. ಇಂತಹ ಕಾನೂನು ಭಂಜಕರನ್ನು ರಾಜ್ಯದ ಸಿಎಂ, ಗೃಹ ಸಚಿವರು ಕಾನೂನು ಕ್ರಮ ಕೈಗೊಂಡು ಜೈಲಿಗಟ್ಟಿದ್ದಾರೆ. ಅಲ್ಲದೆ ಇಂತಹ ಘಟನೆ ಮುಂದೆ ನಡೆಯದಂತೆ ಸುಗ್ರೀವಾಜ್ಞೆ ಹೊರಡಿಸಿರುವ ಸಿಎಂ ನಡೆ ನಿಜಕ್ಕೂ ಸ್ವಾಗತಾರ್ಹ. ಈ ಮೂಲಕ ಸರ್ಕಾರಿ ಅಧಿಕಾರಿಗಳಿಗೆ, ವೈದ್ಯಕೀಯ ಸಿಬ್ಬಂದಿಗೆ, ಆಶಾ ಕಾರ್ಯಕರ್ತೆಯರಿಗೆ ರಕ್ಷಣೆ ದೊರಕಿದಂತಾಗಿದೆ ಎಂದು ನಳಿನ್ ಕುಮಾರ್ ಹೇಳಿದರು.