ಮಂಗಳೂರು: ಕಾಂಗ್ರೆಸ್ನೊಳಗೆ ಆಂತರಿಕ ಗೊಂದಲ ಜಾಸ್ತಿಯಾಗಿದೆ. ಸಿದ್ದರಾಮಯ್ಯ, ಡಿಕೆಶಿ ಮತ್ತು ಜಾರಕಿಹೊಳಿ ತಂಡ ಪ್ರತ್ಯೇಕವಾಗಿ ಇಬ್ಭಾಗವಾಗುತ್ತಿದೆ. ಅದರ ಮಧ್ಯೆ ಮರಿ ಖರ್ಗೆ ಮುಖ್ಯಮಂತ್ರಿ ಆಗುವ ಬೇಡಿಕೆ ಇಡುತ್ತಿದಾರೆ. ಕಾಂಗ್ರೆಸ್ ಡಿವೈಡ್ ಆಗುತ್ತಿದ್ದು, ಹಸ್ತದೊಳಗೆ ಹಸ್ತದ ಆಪರೇಷನ್ ಆಗುತ್ತಿದೆ ಎಂದು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು, ಇನ್ನು ಕೆಲವೇ ದಿನಗಳಲ್ಲಿ 30 - 40 ಶಾಸಕರು ಕಾಂಗ್ರೆಸ್ ನಿಂದ ಹೊರಗೆ ಬರುತ್ತಾರೆ. ಈ ಭಯದಿಂದ ಕಾಂಗ್ರೆಸ್ನವರು ಬಿಜೆಪಿಯಿಂದ ಬರುತ್ತಿದ್ದಾರೆ ಎಂದು ಹೇಳುವ ಮೂಲಕ ದಾರಿ ತಪ್ಪಿಸುತ್ತಿದ್ದಾರೆ. ಆದರೆ, ಯಾವುದೇ ಕಾರಣಕ್ಕೂ ಬಿಜೆಪಿಯಿಂದ ಯಾರೂ ಹೋಗುತ್ತಿಲ್ಲ. ಬೆಳಗಾವಿ ಅಧಿವೇಶನ ಮುಗಿದ ತಕ್ಷಣ ಕಾಂಗ್ರೆಸ್ನಲ್ಲಿ ದೊಡ್ಡ ಪರಿವರ್ತನೆಯಾಗುತ್ತದೆ. ಸಿಎಂ ಹುದ್ದೆಗೆ ಹತ್ತಾರು ಟವಲ್ಗಳು ಬಿದ್ದಿವೆ. ಜಾರಕಿಹೊಳಿ, ಪರಮೇಶ್ವರ್ ಜೊತೆಗೆ ದಲಿತ ಸಿಎಂ ಕಾರ್ಡ್ಗಳೂ ಉರುಳುತ್ತಿವೆ ಎಂದರು.
ಹದಗೆಟ್ಟ ಶಾಂತಿ ಸುವ್ಯವಸ್ಥೆ: ಸರ್ಕಾರ ಟೇಕಾಫ್ ಆಗುತ್ತಿಲ್ಲ, ಅಭಿವೃದ್ಧಿ ಕಾರ್ಯ ಆಗುತ್ತಿಲ್ಲ. ಶಾಂತಿ ಸುವ್ಯವಸ್ಥೆ ಹದಗೆಟ್ಡಿದೆ. ನಾಲ್ಕು ತಿಂಗಳಲ್ಲಿ ಮುನ್ನೂರು ರೈತರ ಆತ್ಮಹತ್ಯೆ ಆಗಿದೆ. ಉಡುಪಿಯಲ್ಲಿ ಹಾಡಹಗಲೇ ನಾಲ್ವರ ಹತ್ಯೆ ಆಗಿದೆ. ಶಾಂತಿ ಸುವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ, ಬರ ನಿಯಂತ್ರಣ ಆಗಿಲ್ಲ. ರಾಜ್ಯದಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಿ ತಲವಾರ್ ತೋರಿಸಿದ್ರೂ ಬಂಧನವಾಗುತ್ತಿಲ್ಲ. ರಾಷ್ಟ್ರ ವಿರೋಧಿ ಶಕ್ತಿಗಳು ರಾಜ್ಯದಲ್ಲಿ ಎದ್ದು ನಿಂತಿವೆ ಎಂದು ಇದೇ ವೇಳೆ ಕಟೀಲ್ ಆರೋಪಿಸಿದರು.
ಕೇಂದ್ರ ಸರ್ಕಾರದ ಅನುದಾನದಲ್ಲಿ ಕೆಲಸ: ಮೋದಿ ಸರ್ಕಾರ ಕೊಟ್ಟ ಅನುದಾನದಲ್ಲಿ ರಾಜ್ಯದಲ್ಲಿ ಕೆಲಸ ಆಗ್ತಿದೆ. ರಾಜ್ಯದಿಂದ ಒಂದು ರೂಪಾಯಿ ಕೂಡ ಬಿಡುಗಡೆಯಾಗಿಲ್ಲ. ಈ ಸರ್ಕಾರ ಭ್ರಷ್ಟಾಚಾರದ ಸರ್ಕಾರ. ಅಧಿಕಾರಿಗಳ ಸಂಬಳ ಕೊಡಲು ಕೂಡ ಹಣವಿಲ್ಲ. ಮೂರ್ನಾಲ್ಕು ತಿಂಗಳು ಕಾದು ನೋಡಿ, ಎಲ್ಲವೂ ಗೊತ್ತಾಗಲಿದೆ ಎಂದು ಹೇಳಿದರು.
ಮಂಗಳೂರಿಗೆ ಬಿ.ವೈ ವಿಜಯೇಂದ್ರ: ನಾಳೆ ಬಿಜೆಪಿ ನೂತನ ರಾಜ್ಯಾಧ್ಯಕ್ಷರಾಗಿರುವ ಬಿ.ವೈ ವಿಜಯೇಂದ್ರ ಮಂಗಳೂರಿಗೆ ಆಗಮಿಸುತ್ತಿದ್ದಾರೆ. ಅವರಿಗೆ ವಿಮಾನ ನಿಲ್ದಾಣದಿಂದ ಮೆರವಣಿಗೆ ಮೂಲಕ ಇಲ್ಲಿಯ ಬಿಜೆಪಿ ಕಚೇರಿಗೆ ಕರೆತರಲಾಗುತ್ತದೆ. ಬಳಿಕ ಕಾರ್ಯಕರ್ತ ರಿಂದ ಅಭಿನಂದನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಂತರ ಆಯೋಜನೆ ಗೊಂಡಿರುವ ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ ಎಂದು ಸಂಸದ ನಳೀನ್ ಕುಮಾರ್ ಕಟೀಲ್ ತಿಳಿಸಿದರು.
ಇದನ್ನೂ ಓದಿ: ಬೆಳಗಾವಿ ಅಧಿವೇಶನ: ₹300 ಕೋಟಿ ವೆಚ್ಚದಲ್ಲಿ ಶಾಸಕರು, ಅಧಿಕಾರಿಗಳ ವಾಸ್ತವ್ಯಕ್ಕೆ ಪಂಚತಾರಾ ಹೊಟೇಲ್ ನಿರ್ಮಾಣಕ್ಕೆ ಚಿಂತನೆ