ಮಂಗಳೂರು: ನಾಗರಪಂಚಮಿ ದಿನ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ನಾಗಕ್ಷೇತ್ರ ಕುಡುಪು ಶ್ರೀ ಅನಂತಪದ್ಮನಾಭ ಕ್ಷೇತ್ರಕ್ಕೆ ಭಕ್ತರು ಆಗಮಿಸಿ ನಾಗನಿಗೆ ತನು ಎರೆದು ಕೃತಾರ್ಥರಾಗುತ್ತಿದ್ದರು.
ಆದರೆ, ಈ ಬಾರಿ ಕೊರೊನಾ ಸೋಂಕು ಹರಡುವ ಭೀತಿಯ ಹಿನ್ನೆಲೆಯಲ್ಲಿ ಶ್ರೀಕ್ಷೇತ್ರ ಕುಡುಪುವಿನ ಆಡಳಿತ ಮಂಡಳಿ ನಾಗರಪಂಚಮಿಯಂದು ಭಕ್ತರ ದೇಗುಲ ಪ್ರವೇಶಕ್ಕೆ ನಿರ್ಬಂಧ ವಿಧಿಸಿದೆ. ಪರಿಣಾಮ ಭಕ್ತರಿಲ್ಲದೇ ದೇವಳದಲ್ಲಿ ಸಾಂಕೇತಿಕವಾಗಿ ನಾಗರಕಲ್ಲಿಗೆ ಹಾಲು, ಸೀಯಾಳಗಳ ತನು ಎರೆಯಲಾಗಿದೆ.
ಪ್ರತಿ ಬಾರಿ ದೇಗುಲದಲ್ಲಿ ಬೆಳ್ಳಂಬೆಳಗ್ಗೆಯೇ ಜನದಟ್ಟಣೆ ಕಂಡು ಬರುತ್ತಿತ್ತು. ಹಾಲು, ಸೀಯಾಳ, ಹೂವು, ಹರಕೆ ವಸ್ತುಗಳನ್ನು ಹಿಡಿದು ನಿಂತಿರುವ ಸಾಲು ಸಾಲು ಜನಗಳು ಇರುತ್ತಿದ್ದರು. ಕುಡುಪು ಪರಿಸರದಲ್ಲಿ ಬಹಳಷ್ಟು ವಾಹನದಟ್ಟಣೆಯೂ ಕಂಡು ಬರುತ್ತಿತ್ತು.
ಆದರೆ, ಈ ಬಾರಿ ಭಕ್ತರಿಗೆ ದೇಗುಲ ಪ್ರವೇಶಕ್ಕೆ ನಿರ್ಬಂಧ ವಿಧಿಸಿರುವುದರಿಂದ ಅಲ್ಲೊಬ್ಬರು ಇಲ್ಲೊಬ್ಬರು ಎಂದು ಬೆರಳೆಣಿಕೆಯಷ್ಟು ಜನರನ್ನು ಬಿಟ್ಟರೆ ಯಾವುದೇ ಸಂಭ್ರಮವಿಲ್ಲ. ನಾಗರಕಲ್ಲಿಗೆ ದೇವಳದ ವತಿಯಿಂದ ಸಾಂಕೇತಿಕ ಪೂಜೆ ನೆರವೇರಿಸಲಾಗಿದೆ. ಯಾವುದೇ ಸಂಭ್ರಮ, ಗದ್ದಲ ಕಂಡು ಬರುತ್ತಿಲ್ಲ.
ಕುಡುಪು ದೇಗುಲದ ಹಿಂಭಾಗದಲ್ಲಿರುವ ನಾಗರಕಲ್ಲು ಇರುವಲ್ಲಿ ಪ್ರತೀ ಬಾರಿ ನೂಕುನುಗ್ಗಲು, ಜನಸಂದಣಿ, ಸಾಲು ತನು ಎರೆಯಲು ಸಾಲು ನಿಂತಿರುವ ಜನರಿರುವಲ್ಲಿ ಈ ಬಾರಿ ಯಾವುದೇ ಸಂಭ್ರಮ, ಕಳೆ ಇಲ್ಲ. ಒಬ್ಬಿಬ್ಬರು ಪುರೋಹಿತರನ್ನು ಹೊರತು ಪಡಿಸಿ ಜನರ ಸುಳಿವಿಲ್ಲ.