ಮಂಗಳೂರು : ಪತ್ನಿಯನ್ನು ಕಲ್ಲಿನ ಕೋರೆಗೆ ತಳ್ಳಿ ಹತ್ಯೆಗೈದ ಪ್ರಕರಣದ ಆರೋಪಿ ಗಣೇಶ್ ಕುಮಾರ್ (35)ನಿಗೆ ಮಂಗಳವಾರ ನ್ಯಾಯಾಲಯ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಆರೋಪಿ ಗಣೇಶ್‌ಕುಮಾರ್‌ನ ಕೋವಿಡ್ ಪರೀಕ್ಷಾ ವರದಿ ನೆಗೆಟಿವ್ ಬಂದಿರುವ ಹಿನ್ನೆಲೆ ಆತನನ್ನು ಮಂಗಳವಾರ ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿ, ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ. ಹಾಗಾಗಿ ಇದೀಗ ಆತನನ್ನು ಆಸ್ಪತ್ರೆಯಿಂದ ನಗರದ ಸಬ್ ಜೈಲಿಗೆ ವರ್ಗಾಯಿಸಲಾಗಿದೆ.
ಪ್ರಕರಣದ ಆರೋಪಿ ಗಣೇಶ್‌ಕುಮಾರ್ ಎಂಬಾತ ಪತ್ನಿ ಶಾಂತಾ (30)ರ ಶೀಲದ ಬಗ್ಗೆ ಶಂಕೆ ವ್ಯಕ್ತಪಡಿಸಿ, ಜುಲೈ1ರಂದು ಸಂಜೆ ಕಾವೂರಿನ ಮನೆಯಿಂದ ಕರೆದುಕೊಂಡು ಹೋಗಿ ಕರಂಬಾರು ಅಂತೋಣಿಕಟ್ಟೆಯ ಬಳಿ ಕಲ್ಲಿನಕೋರೆಗೆ ದೂಡಿ ಹತ್ಯೆ ಮಾಡಿದ್ದ ಎಂದು ದೂರು ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಜುಲೈ 5ರಂದು ಗಣೇಶ್ ಕುಮಾರ್‌ನನ್ನು ಕಾವೂರು ಪೊಲೀಸರು ಬಂಧಿಸಿದ್ದರು.
ಈ ಸಂದರ್ಭ ಆತನ ಬಂಧನ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಕಾವೂರು ಠಾಣೆಯ ಇನ್ಸ್‌ಪೆಕ್ಟರ್ ಸಹಿತ ನಾಲ್ವರು ಪೊಲೀಸರನ್ನು ಹೋಮ್ ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು. ಕೆಲವು ದಿನಗಳ ಬಳಿಕ ಗಣೇಶ್ ಕುಮಾರ್‌ನನ್ನು ಮತೊಮ್ಮೆ ಪರೀಕ್ಷೆಗೆ ಒಳಪಡಿಸಿದಾಗಲೂ ಪಾಸಿಟಿವ್ ಬಂದಿತ್ತು. ಆದರೆ, 3ನೇ ಬಾರಿ ಆತನನ್ನು ಕೊರೊನಾ ತಪಾಸಣೆಗೆ ಒಳಪಡಿಸಿದ್ದು, ಜುಲೈ 21ರಂದು ವರದಿ ನೆಗೆಟಿವ್ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹಿನ್ನೆಲೆ ಆತನನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿ ಕಾವೂರು ಪೊಲೀಸ್ ಠಾಣೆಗೆ ಕರೆದೊಯ್ದು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ನ್ಯಾಯಾಧೀಶರು ಆರೋಪಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ಇದೀಗ ಆರೋಪಿ ಗಣೇಶ್ ಕುಮಾರ್‌ನಿಗೆ ವೆನ್ಲಾಕ್ ಆಸ್ಪತ್ರೆಯಲ್ಲಿ ಬೆಂಗಾವಲಾಗಿ ನಿಂತಿದ್ದ ನಾಲ್ವರು ಪೊಲೀಸರನ್ನು ಹೋಮ್ ಕ್ವಾರಂಟೈನ್‌ಗೊಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.