ಬಂಟ್ವಾಳ: ತಾಲೂಕಿನ ಬಡಗಬೆಳ್ಳೂರು ನಿವಾಸಿ ಬಿಜೆಪಿ ಅಮ್ಟಾಡಿ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಬೆಳ್ಳೂರು (31) ಕೊಲೆಗೆ ಯತ್ನಿಸಿದ ಘಟನೆ ವೈಯಕ್ತಿಕ ಕಾರಣಕ್ಕೆ ನಡೆದಿದ್ದು ಎನ್ನಲಾಗಿದ್ದು, ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ರಾತ್ರಿ ನಿತಿನ್ ಬಡಗಬೆಳ್ಳೂರು ಮತ್ತು ನಿಶಾಂತ್ ಬಡಗಬೆಳ್ಳೂರು, ಪವನ್ ಕುಮ್ಡೇಲ್ ಹಾಗೂ ಇನ್ನಿತರರು ಸೇರಿ ಮಚ್ಚು-ಲಾಂಗುಸಹಿತ ಮನೆಗೆ ಪ್ರಕಾಶ್ ಮನೆಗೆ ನುಗ್ಗಿದ್ದರು. ಬಳಿಕ ಮನೆಯಲ್ಲಿದ್ದ ಪ್ರಕಾಶ್ ಮೇಲೆ ತಲವಾರಿನಿಂದ ಮಾರಣಾಂತಿಕ ದಾಳಿ ನಡೆಸಿದ್ದರು. ಈ ವೇಳೆ ಹಲ್ಲೆಯನ್ನು ತಡೆಯಲು ಬಂದ ಪ್ರಕಾಶ್ ತಾಯಿ ಮತ್ತು ಅಣ್ಣನಿಗೆ ಆರೋಪಿಗಳು ಕೊಲೆ ಬೆದರಿಕೆ ಹಾಕಿ ಅಲ್ಲಿಂದ ಹೋದರು ಎಂದು ಪ್ರಕಾಶ್ ಕುಟುಂಬಸ್ಥರು ಆರೋಪಿಸಿದ್ದಾರೆ.
ಪ್ರಕಾಶ್ ಬೆಳ್ಳೂರು ನೀಡಿದ ದೂರಿನ ಪ್ರಕಾರ, ಈ ಹಿಂದೆ ವಿಚಾರವೊಂದಕ್ಕೆ ಸಂಬಂಧಿಸಿ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ ಹಿನ್ನೆಲೆಯಲ್ಲಿ ಆರೋಪಿಗಳು ಕೊಲೆ ಬೆದರಿಕೆ ಹಾಕಿದ್ದರು. ಈ ಕುರಿತು ಈಗಾಗಲೇ ದೂರು ನೀಡಲಾಗಿತ್ತು. ಅ.26ರಂದು ಸಂಜೆ 7.30ಕ್ಕೆ ಪ್ರಕಾಶ್ ಮನೆಯಲ್ಲಿದ್ದ ಸಮಯದಲ್ಲಿ ನಿತಿನ್, ನಿಶಾಂತ್ ಮತ್ತಿತರರು ಪ್ರವೇಶಿಸಿ, ತಲವಾರು ಹಿಡಿದುಕೊಂಡು ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಫೇಸ್ಬುಕ್ನಲ್ಲಿ ಪೋಸ್ಟ್ ಮಾಡುವ ವಿಚಾರವನ್ನು ಪ್ರಸ್ತಾಪಿಸಿ ತಲವಾರು ಬೀಸಿದ್ದು, ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಎಡ ಕಿವಿಗೆ ತಾಗಿದೆ. ಬಳಿಕ ಪ್ರಕಾಶ್ ಅವರನ್ನು ಥಳಿಸಿ ಹಲ್ಲೆ ಮಾಡಿದ್ದಾರೆ.
ಹಲ್ಲೆಯಿಂದಾಗಿ ಪ್ರಕಾಶ್ ಗಂಭೀರವಾಗಿ ಗಾಯಗೊಂಡಿದ್ದರು. ಈ ವೇಳೆ ಮನೆಯಲ್ಲಿದ್ದ ಅಣ್ಣ, ಅತ್ತಿಗೆ ಗಲಾಟೆ ಬಿಡಿಸಲು ಮುಂದೆ ಬಂದಿದ್ದಾರೆ. ಆದ್ರೆ ಆರೋಪಿಗಳು ನಿಮ್ಮನ್ನೂ ಸಹ ಜೀವಸಹಿತ ಬಿಡುವುದಿಲ್ಲ ಎಂದು ಬೆದರಿಕೆಯೊಡ್ಡಿದ್ದಾರೆ. ಬಳಿಕ ಆರೋಪಿಗಳು ಮನೆಯಿಂದ ಓಡಿ ಹೋದರು ಎಂದು ಪ್ರಕಾಶ್ ಮತ್ತು ಆತನ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಪ್ರಕಾಶ್ ಬಂಟ್ವಾಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.