ಮಂಗಳೂರು : ಅರಬ್ಬೀ ಸಮುದ್ರದಲ್ಲಿ ಟಗ್ ಬೋಟ್ನಲ್ಲಿ ಸಿಲುಕಿದ್ದ 9 ಮಂದಿ ಕಾರ್ಮಿಕರನ್ನು ಸುರಕ್ಷಿತವಾಗಿ ಕರೆ ತಂದಿರುವ ರಕ್ಷಣಾ ಸಿಬ್ಬಂದಿಗೆ ಸಂಸದ ನಳಿನ್ ಕುಮಾರ್ ಕಟೀಲ್ ಅಭಿನಂದನೆ ಸಲ್ಲಿಸಿದ್ದಾರೆ.
ರಕ್ಷಣೆಗೊಳಗಾಗಿರುವ ನಾಲ್ವರು ನಗರದ ಎನ್ಎಂಪಿಟಿ ಆಸ್ಪತ್ರೆಗೆ ದಾಖಲಾಗಿದ್ದು, ಅವರ ಆರೋಗ್ಯ ವಿಚಾರಿಸಿದ ಬಳಿಕ ಮಾತನಾಡಿದ ನಳಿನ್ ಕುಮಾರ್ ಕಟೀಲ್, ಚಂಡಮಾರುತದಿಂದ ಸಮುದ್ರದಲ್ಲಿ ಸಿಲುಕೊಂಡಿದ್ದ ಎಂಆರ್ಪಿಎಲ್ ತೈಲ ಘಟಕದ ಟಗ್ ಬೋಟ್ ಕೋರಮಂಡಲ ಸಪೋರ್ಟರ್-9ರ ಗುತ್ತಿಗೆ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಕಾರ್ಯಾಚರಣೆ ನಡೆಸಿದ ಭಾರತೀಯ ಕರಾವಳಿ ತಟರಕ್ಷಣಾ ಪಡೆಯ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.
ಕಳೆದ ಮೂರು ದಿನಗಳಿಂದ ಜಿಲ್ಲಾಡಳಿತ, ಎನ್ಎಂಪಿಟಿ, ಭಾರತೀಯ ಕರಾವಳಿ ತಟರಕ್ಷಣಾ ಪಡೆಯಿಂದ ರಕ್ಷಣಾ ಕಾರ್ಯಾಚರಣೆ ಮುಂದುವರಿದಿತ್ತು. ಅಪಾಯದಲ್ಲಿ ಸಿಲುಕಿದ್ದ ಕಾರ್ಮಿಕರ ಮೊಬೈಲ್ ಸಂದೇಶದ ಮೂಲಕ ಕಾಪು ದೀಪಸ್ತಂಭದ ಸುಮಾರು ಆರು ಕಿ.ಮೀ.ದೂರದಲ್ಲಿ ಅವರು ಇರುವ ಸ್ಥಳ ಗುರುತು ಪತ್ತೆಯಾಗಿತ್ತು ಎಂದು ತಿಳಿಸಿದರು.
ಓದಿ : ಅರಬ್ಬೀ ಸಮುದ್ರದಲ್ಲಿ ಸಿಲುಕಿದ್ದ 9 ಮಂದಿಯ ರಕ್ಷಣೆ : ಕೋಸ್ಟ್ ಗಾರ್ಡ್, ನೌಕಾದಳಕ್ಕೆ ಸಿಎಂ ಕೃತಜ್ಞತೆ
ನಿನ್ನೆ ರಕ್ಷಣಾ ಕಾರ್ಯಾಚರಣೆ ಮಾಡಲು ಭಾರತೀಯ ಕರಾವಳಿ ತಟರಕ್ಷಣಾ ಪಡೆಯ ಹಡಗುಗಳು ಅಪಾಯಕ್ಕೆ ಸಿಲುಕಿದ್ದ ಬೋಟ್ನ ಸಮೀಪ ಹೋದರೂ, ಅಲೆಯ ಆರ್ಭಟ ಹೆಚ್ಚಾಗಿದ್ದರಿಣದ ಅದರ ಸಮೀಪಕ್ಕೆ ಹೋಗಲೂ ಸಾಧ್ಯವಾಗಿರಲಿಲ್ಲ. ಆದ್ದರಿಂದ ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ರೊಂದಿಗೆ ಮಾತನಾಡಿ ಎರಡು ನೇವಲ್ ಹೆಲಿಕಾಪ್ಟರ್ ತರಿಸುವ ಪ್ರಯತ್ನಗಳಾಯಿತು.
ಆದರೆ, ನಿನ್ನೆ ಗೋವಾದಿಂದ ಬರಬೇಕಿದ್ದ ಈ ಹೆಲಿಕಾಪ್ಟರ್ಗಳಿಗೆ ಗಾಳಿಯ ಅಡ್ಡಿಯಿಂದ ಬರಲಾಗಿರಲಿಲ್ಲ. ಅದಕ್ಕಾಗಿ ಕೊಚ್ಚಿಯ ಸಂಪರ್ಕ ಮಾಡಲಾಯಿತು. ಅಲ್ಲಿಯೂ ಮಳೆಯ ಪರಿಣಾಮ ವಿಮಾನ ನಿಲ್ದಾಣ ಬಂದ್ ಆಗಿತ್ತು ಎಂದರು.
ರಾತ್ರಿ ಹೆಲಿಕಾಪ್ಟರ್ ಬರಲಾಗದ ಕಾರಣ ಇಂದು ಬೆಳಗ್ಗೆ ಬಂದು ನಾಲ್ವರನ್ನು ರಕ್ಷಣೆ ಮಾಡಿದೆ. ಹೆಲಿಕಾಪ್ಟರ್ ಇವರನ್ನು ಮಂಗಳೂರು ವಿಮಾನ ನಿಲ್ದಾಣಕ್ಕೆ ಕೊಂಡೊಯ್ದಿದ್ದು, ಅಲ್ಲಿಂದ ಎನ್ಎಂಪಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇವರು ಆರೋಗ್ಯವಾಗಿದ್ದು, ಕೋವಿಡ್ ತಪಾಸಣೆ ಮಾಡಲಾಗುತ್ತಿದೆ. ಆದರೆ, ಅವರ ಮಾನಸಿಕ ಸ್ಥೈರ್ಯಕ್ಕಾಗಿ 24 ಗಂಟೆಗಳ ಕಾಲ ಆಸ್ಪತ್ರೆಯಲ್ಲಿ ಇರಿಸಲಾಗುತ್ತದೆ. ಉಳಿದ ಐವರನ್ನು ಭಾರತೀಯ ಕರಾವಳಿ ತಟರಕ್ಷಣಾ ಪಡೆಯು ಹಡಗಿನ ಮುಖಾಂತರ ರಕ್ಷಣಾ ಕಾರ್ಯಾಚರಣೆ ಮಾಡಲಾಗಿದೆ ಎಂದು ತಿಳಿಸಿದರು.