ಮಂಗಳೂರು: ಮೂಡುಬಿದಿರೆ ಸರ್ವೇಯರ್ ಕಚೇರಿಯು ಪ್ರತಿ ವರ್ಷದಂತೆ ಈ ವರ್ಷವೂ ಮಳೆಗಾಲದ ಆರಂಭದಲ್ಲಿಯೇ ಸೋರಲು ಶುರುವಾಗಿದ್ದು, ದಾಖಲೆಗಳನ್ನು ರಕ್ಷಿಸಲು ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.
ಇದು ಕಳೆದ ಏಳೆಂಟು ವರ್ಷಗಳ ಸಮಸ್ಯೆಯಾಗಿದ್ದು, ಮಳೆ ಬಂದರೆ ಸಾಕು ಸೋರುತ್ತಿರುವ ಕಚೇರಿಯಲ್ಲಿಯೇ ಸಿಬ್ಬಂದಿ ಕಾರ್ಯನಿರ್ವಹಿಸುವ ದುಸ್ಥಿತಿ ಎದುರಾಗುತ್ತದೆ. ನೀರು ಸೋರುವುದನ್ನು ನಿಲ್ಲಿಸಲು ಸಿಬ್ಬಂದಿ ಎರಡು ಸಲ ತಗಡಿನ ಶೀಟ್ ಕೂಡಾ ಅಳವಡಿಸಿದ್ದರು. ಆದರೆ ಈ ವರ್ಷದ ಮಳೆಗೂ ಮತ್ತೆ ನೀರು ಸೋರುತ್ತಿದ್ದು, ಸರ್ವೇ ದಾಖಲೆಗಳ ಸಂಗ್ರಹದ ಕಪಾಟು, ಪ್ರಿಂಟರ್ ಮಷಿನ್, ಟೇಬಲ್ಗಳ ಮೇಲೆ ನೀರು ಸೋರುತ್ತಿದೆ.
ಅಲ್ಲದೆ ನೀರು ಸೋರುತ್ತಿರುವ ಪರಿಣಾಮ ಗೋಡೆಯೂ ಶಿಥಿಲಗೊಂಡಿದೆ. ಮೂಡುಬಿದಿರೆ ತಾಲೂಕಿನ 25 ಗ್ರಾಮಗಳ ಸರ್ವೇ ದಾಖಲೆ ಈ ಕಚೇರಿಯಲ್ಲಿದ್ದು, ಮುಂದಿನ ಮಳೆಗೆ ನೀರು ಬಿದ್ದು ಎಲ್ಲಾ ದಾಖಲೆಗಳು ನಾಶವಾಗುವ ಆತಂಕವಿದೆ.
ಹಿರಿಯ ಅಧಿಕಾರಿಗಳು ಕಚೇರಿಗೆ ಪ್ರತೀ ವಾರ ಭೇಟಿ ನೀಡುತ್ತಿದ್ದರೂ ಈ ಬಗ್ಗೆ ಗಮನ ಹರಿಸುತ್ತಿಲ್ಲ. ಇನ್ನಾದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಬಗ್ಗೆ ಗಮನ ವಹಿಸಿದ್ದಲ್ಲಿ ಸರ್ವೇ ದಾಖಲೆಗಳು ರಕ್ಷಿಸಲು ಸಾಧ್ಯವಾಗಲಿದೆ.