ಪುತ್ತೂರು : ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ನಿಯೋಜಿತ ಅಧ್ಯಕ್ಷ ಮೊಹ್ಮದ್ ನಲಪಾಡ್ ಇಂದು ಪುತ್ತೂರಿಗೆ ಆಗಮಿಸಿದ್ರು. ಅವರನ್ನು ಕೆಪಿಸಿಸಿ ಸಂಯೋಜಕರಾಗಿರುವ ಕಾವು ಹೇಮನಾಥ್ ಶೆಟ್ಟಿ ನೇತೃತ್ವದಲ್ಲಿ ಯುವ ಕಾಂಗ್ರೆಸ್ ಪುತ್ತೂರು ಬ್ಲಾಕ್ ಅಧ್ಯಕ್ಷ ಶ್ರೀ ಪ್ರಸಾದ್ ಪಾಷಾಜೆ ಸ್ವಾಗತಿಸಿದರು. ಈ ವೇಳೆ ಮಾತನಾಡಿದ ನಲಪಾಡ್, ಪುತ್ತೂರಿಗೆ ಬಂದಿರುವುದು ನನಗೆ ತುಂಬಾ ಖುಷಿಯಾಯಿತು. ನಿಮ್ಮ ಅಭಿಮಾನಕ್ಕೆ ಋಣಿಯಾಗಿದ್ದೇನೆ. ಪಕ್ಷ ಸಂಘಟನೆ ಮತ್ತು ಕಾಂಗ್ರೆಸ್ ಅಧಿಕಾರ ಬರುವವರೆಗೆ ವಿರಮಿಸದೇ ಒಟ್ಟಾಗಿ ಪಕ್ಷದ ಕೆಲಸ ಮಾಡೋಣ ಎಂದು ಹೇಳಿದ್ರು.
ಈ ವೇಳೆ ಪುತ್ತೂರು ಬ್ಲಾಕ್ ಮಾಜಿ ಅಧ್ಯಕ್ಷ ಫಝಲ್ ರಹೀಂ, ನಗರ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ, ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸನದ್ ಯೂಸುಫ್, ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಯು ಟಿ ತೌಸೀಫ್ ಸೇರಿ ಮತ್ತಿತರರು ಉಪಸ್ಥಿತರಿದ್ದರು.
![puttur](https://etvbharatimages.akamaized.net/etvbharat/prod-images/12385206_thumbnail.jpg)
ಯುವ ಕಾಂಗ್ರೆಸ್ ನಿಯೋಜಿತ ರಾಜ್ಯಾಧ್ಯಕ್ಷರ ಕಾರಿಗಿಲ್ಲ ನಂಬರ್ ಪ್ಲೇಟ್ : ಪುತ್ತೂರಿನಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ ತೈಲ ಬೆಲೆ ಏರಿಕೆ ವಿರುದ್ಧದ ಸೈಕಲ್ ಜಾಥಾ ಕಾರ್ಯಕ್ರಮಕ್ಕೆ ಕಾರಿನಲ್ಲಿ ಬಂದ ಮೊಹ್ಮದ್ ನಲಪಾಡ್, ನೆಹರು ನಗರದ ಮಂಜಲ್ಪಡ್ಪು ಸಮೀಪ ಸೈಕಲ್ ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ರು. ಆದರೆ, ಅವರು ಬಂದಿದ್ದ ಕಾರಿನ ಮುಂಭಾಗದಲ್ಲಿ ನಂಬರ್ ಪ್ಲೇಟ್ ಇರಲಿಲ್ಲ. ಕಾರಿನ ಹಿಂಭಾಗದಲ್ಲಿ ಮಾತ್ರ ನಂಬರ್ ಪ್ಲೇಟ್ ಇತ್ತು.
ಈ ಹಿನ್ನೆಲೆ ಐಷಾರಾಮಿ ಕಾರಿಗೆ ನಂಬರ್ ಪ್ಲೇಟ್ ಹಾಕದೆ ಮೋಟಾರು ವಾಹನ ಕಾಯ್ದೆ ಉಲ್ಲಂಘನೆ ಮಾಡಿದ್ದಾರೆಂದು ಸಾರ್ವಜನಿಕ ವಲಯದಲ್ಲಿ ಆರೋಪ ವ್ಯಕ್ತವಾಗುತ್ತಿದೆ. ರಾಜಕೀಯ ಮುಖಂಡರ ಕಾರು ಎನ್ನುವ ಕಾರಣಕ್ಕೆ ಯಾವುದೇ ಕೇಸ್ ಇಲ್ಲವೇ, ಬಡಪಾಯಿ ವಾಹನ ಚಾಲಕರಿಗೆ ಮಾತ್ರವೇ ಕೇಸ್ ಎಂಬಿತ್ಯಾದಿ ಮಾತುಗಳು ಸಾರ್ವಜನಿಕರ ಬಾಯಲ್ಲಿ ಕೇಳಿ ಬರುತ್ತಿವೆ.