ಮಂಗಳೂರು : ರಾಜಕಾಲುವೆಗಳ ಹೂಳೆತ್ತುವ ಕಾರ್ಯಗಳನ್ನ ಅಧಿಕಾರಿಗಳು ಸಮರ್ಪಕವಾಗಿ ನಿರ್ವಹಿಸದಿದ್ದರೆ, ಮುಂದಿನ ಮಳೆಗಾಲದಲ್ಲಿ ಉಂಟಾಗುವ ಅನಾಹುತಗಳಿಗೆ ಅಧಿಕಾರಿಗಳೇ ನೇರ ಜವಾಬ್ದಾರರು ಎಂದು ಶಾಸಕ ವೇದವ್ಯಾಸ ಕಾಮತ್ ಎಚ್ಚರಿಕೆ ನೀಡಿದ್ದಾರೆ.
ರಾಜಕಾಲುವೆಗಳ ಹೂಳೆತ್ತುವ ಕಾರ್ಯಕ್ಕೆ 1.80 ಕೋಟಿ ರೂ. ಟೆಂಡರ್ ಕೊಡಲಾಗಿದ್ದು, ಈಗಾಗಲೇ ಅದರ ಕೆಲಸ ನಡೆಯುತ್ತಿದೆ. ಮಳೆಗಾಲ ಸಂಪೂರ್ಣ ಮುಗಿಯುವ ತನಕ ಏನಾದರೂ ಅನಾಹುತ ನಡೆದರೆ ಟೆಂಡರ್ ಪಡೆದುಕೊಂಡ ವ್ಯಕ್ತಿಯೇ ಜವಾಬ್ದಾರರಾಗುತ್ತಾರೆಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.
ಮುಂದಿನ ದಿನಗಳಲ್ಲಿ ನಗರದಲ್ಲಿ ಕೃತಕ ನೆರೆ ಬರದಿರುವ ರೀತಿಯಲ್ಲಿ ಎಲ್ಲ ವ್ಯವಸ್ಥೆ ಕೈಗೊಳ್ಳಲಾಗಿದೆ. ಆದರೆ ನೀತಿ ಸಂಹಿತೆ ಇರುವುದರಿಂದ ಪ್ರತಿಯೊಂದು ಕೆಲಸ ಕಾರ್ಯಗಳನ್ನು ಶಾಸಕನ ನೆಲೆಯಲ್ಲಿ ನೋಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳೆ ಇದರ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಬಳಿ ಹೇಳಿದ್ದೇನೆ. ಮುಂದೆ ಎನಾದ್ರೂ ಅನಾಹುತ ಸಂಭವಿಸಿದಲ್ಲಿ ಅಧಿಕಾರಿಗಳೇ ಕಾರಣ ಎಂದರು.
ಜಿಲ್ಲೆಯ ಎಲ್ಲ ರಾಜಕಾಲುವೆಗಳ ಹೂಳೆತ್ತುವ ಕಾರ್ಯಗಳು ಬಾಕಿಯಿದ್ದು, ಈಗಾಗಲೇ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆಗೆ ಕೆಲಸ ಕಾರ್ಯಗಳನ್ನು ಆರಂಭಿಸುವಂತೆ ಸೂಚನೆ ನೀಡಿದ್ದೇನೆ. ರಸ್ತೆಯ ಡಿವೈಡರ್ ಪಕ್ಕದಲ್ಲಿ ಮರಳು ತುಂಬಿದ್ದು, ಮಳೆ ಬಂದಲ್ಲಿ ಇದು ಚರಂಡಿ ಸೇರುತ್ತದೆ. ಆದ್ದರಿಂದ ಇದರ ತೆರವು ಕಾರ್ಯಗಳು ಆಗಬೇಕಿದೆ. ಮೊನ್ನೆಯಿಂದ ಇದರ ಕೆಲಸ ಆರಂಭವಾಗಿದೆ ಎಂದು ಮಾಹಿತಿ ನೀಡಿದರು.
ನಗರದಲ್ಲಿರುವ ಎಲ್ಲಾ ಚರಂಡಿಗಳಲ್ಲಿ ಒಂದು ಮೀಟರ್ ನಷ್ಟು ಹೂಳೆತ್ತುವ ಕಾರ್ಯವನ್ನು ಆ್ಯಂಟನಿ ವೇಸ್ಟ್ ಮ್ಯಾನೇಜ್ಮೆಂಟ್ ನ ಟೆಂಡರ್ ನಲ್ಲಿ ಇದೆ. ಹಲವಾರು ಕಡೆಗಳಲ್ಲಿ ಈಗಾಗಲೇ ಹೂಳೆತ್ತುವ ಕಾರ್ಯ ಪೂರ್ಣಗೊಂಡಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಸಾರ್ವಜನಿಕರು ಸುಮಾರು ಕಡೆಗಳಲ್ಲಿ ಇನ್ನೂ ಪೂರ್ಣಗೊಂಡಿಲ್ಲ ಎಂದು ದೂರುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆಯು ವ್ಯಾಟ್ಸ್ ಆ್ಯಪ್ ಸಂಖ್ಯೆಯೊಂದನ್ನು ನೀಡಿದ್ದು ಸಾರ್ವಜನಿಕರಿಗೆ ದೂರು ನೀಡುವಂತಹ ಸೌಲಭ್ಯ ನಿರ್ಮಾಣ ಮಾಡಬೇಕು ಎಂದು ಪಾಲಿಕೆಗೆ ಆದೇಶ ನೀಡಿದ್ದೇನೆ. ಡಿಸಿಯವರು ಈ ಬಗ್ಗೆ ವಿಚಾರಣೆ ನಡೆಸಿ ಮಾಹಿತಿ ಪಡೆಯುವ ಕಾರ್ಯವನ್ನು ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆಂದು ವೇದವ್ಯಾಸ ಕಾಮತ್ ತಿಳಿಸಿದರು.