ಮಂಗಳೂರು : ನಗರದಲ್ಲಿರುವ ಆದಾಯ ತೆರಿಗೆ ಕಚೇರಿಯನ್ನು ಗೋವಾಕ್ಕೆ ಸ್ಥಳಾಂತರಿಸುವ ಅಥವಾ ವಿಲೀನಗೊಳಿಸುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿರುವ ಅವರು, ನಗರದಲ್ಲಿ ಆದಾಯ ತೆರಿಗೆ ಇಲಾಖೆಯ ಪ್ರಧಾನ ಆಯುಕ್ತರ ಕಚೇರಿ ಇದೆ. ಗೋವಾದಲ್ಲಿ ಕೂಡ ಪ್ರಧಾನ ಆಯುಕ್ತರ ಕಚೇರಿ ಇದೆ. ಇಲ್ಲಿರುವ ಹಾಗೂ ಹುಬ್ಬಳ್ಳಿ ಪ್ರಧಾನ ಆಯುಕ್ತರ ಕಚೇರಿಯನ್ನು ಗೋವಾ ಪ್ರಧಾನ ಆಯುಕ್ತರ ಕಚೇರಿಗೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಆಯುಕ್ತರು ಮಾತ್ರ ಗೋವಾಕ್ಕೆ ಹೋಗುತ್ತಾರೆ ಎಂಬುದನ್ನು ಬಿಟ್ಟರೆ, ಕಚೇರಿ ಗೋವಾಕ್ಕೆ ಹೋಗುವುದಿಲ್ಲ ಎಂದು ಹೇಳಿದರು.
ಆದಾಯ ತೆರಿಗೆ ಇಲಾಖೆಗೆ ಮಂಗಳೂರು ದೊಡ್ಡ ಆದಾಯ ಕೊಡುವ ಕೇಂದ್ರವಾಗಿದೆ. ಮಂಗಳೂರು ಆದಾಯ ತೆರಿಗೆ ಕಚೇರಿಗೆ ಇಲ್ಲಿನ ತೆರಿಗೆದಾರರು 4000 ಕೋಟಿ ಆದಾಯ ತೆರಿಗೆ ಪಾವತಿಸುವ ಮೂಲಕ ದೊಡ್ಡ ಆದಾಯವಿದೆ. ಈ ಹಿನ್ನೆಲೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಹಣಕಾಸು ಸಚಿವರಿಗೆ , ಕೇಂದ್ರ ಸಚಿವರಾದ ಸದಾನಂದ ಗೌಡ, ಪ್ರಹ್ಲಾದ್ ಜೋಷಿಯವರಿಗೆ ಮಾಹಿತಿ ಕೊಟ್ಟು ಸರಿಪಡಿಸುವ ಭರವಸೆಯನ್ನು ಪಡೆದುಕೊಂಡಿದ್ದಾರೆ ಎಂದರು.
ನಾನು ಕೂಡ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ ಮತ್ತು ಸದಾನಂದ ಗೌಡ ಅವರ ಜೊತೆಗೆ ಮಾತನಾಡಿ ಪ್ರಧಾನ ಆಯುಕ್ತರ ಕಚೇರಿಯನ್ನು ಮಂಗಳೂರಿನಲ್ಲಿ ಉಳಿಸುವಂತೆ ವಿನಂತಿಸಿದ್ದೇನೆ. ಆದಾಯ ತೆರಿಗೆ ಕಚೇರಿ ಗೋವಾಕ್ಕೆ ಸ್ಥಳಾಂತರವಾಗುತ್ತದೆ ಎಂದು ಬಿಂಬಿತವಾಗುತ್ತಿರುವುದು ಮತ್ತು ಇದರಿಂದ ಕಾಂಗ್ರೆಸ್ ಇದರ ರಾಜಕೀಯ ಲಾಭ ಮಾಡಲು ಷಡ್ಯಂತ್ರ ನಡೆಸುತ್ತಿದೆ. ಪ್ರಧಾನ ಆಯುಕ್ತರ ಕಚೇರಿ ಮಾತ್ರ ಗೋವಾಕ್ಕೆ ಹೋಗುತ್ತದೆ. ಅದನ್ನು ಮತ್ತೆ ಮಂಗಳೂರಿನಲ್ಲಿ ಉಳಿಸುವ ಕಾರ್ಯವನ್ನು ಸಂಸದರು ಮಾಡಲಿದ್ದಾರೆ ಎಂದರು.
ಕಾಂಗ್ರೆಸ್ ಜನರನ್ನು ಈ ವಿಚಾರದಲ್ಲಿ ತಪ್ಪು ದಾರಿಗೆ ಎಳೆಯಬಾರದು. ಜನರು ಕೂಡ ಇಂತಹ ತಪ್ಪು ಸಂದೇಶಗಳಿಗೆ ಜನರು ಕಿವಿಗೊಡಬಾರದು ಎಂದು ಮನವಿ ಮಾಡಿದರು.