ಮಂಗಳೂರು : ಕುಳಾಯಿ 9ನೇ ವಾರ್ಡ್‌ನಲ್ಲಿ ನಿರ್ಮಾಣವಾಗಲಿರುವ ಸುಮಾರು 35 ಲಕ್ಷ ರೂಪಾಯಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಡಾ. ವೈ ಭರತ್ ಶೆಟ್ಟಿ ಅವರು ಗುದ್ದಲಿ ಪೂಜೆ ನೆರವೇರಿಸಿದರು.
ಕುಳಾಯಿ ವಿಷ್ಣುಮೂರ್ತಿ ದೇವಸ್ಥಾನದ ಬಳಿ 10 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರಿಟೀಕರಣ, ಕೋಡಿಕೆರೆ ಬಳಿ 5 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ, ಕುಳಾಯಿ ಚಿತ್ರಾಪುರ ಶ್ರೀ ವೀರಮಾರುತಿ ಮಂದಿರ ಮತ್ತು ಮಹಾವಿಷ್ಣು ಮಂದಿರದ ಬಳಿ 8 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ, ಕುಳಾಯಿ ಚಿತ್ರಾಪುರ ಪಾಂಡುರಂಗ ಮಂದಿರದ ಬಳಿ 12 ಲಕ್ಷ ರೂ. ವೆಚ್ಚದಲ್ಲಿ ಒಳಚರಂಡಿ ಮತ್ತು ಚಪ್ಪಡಿ ಹಾಕುವಿಕೆ ಕಾಮಗಾರಿಗೆ ಚಾಲನೆ ನೀಡಲಾಯಿತು.
ಈ ಸಂದರ್ಭ ಮಾತನಾಡಿದ ಶಾಸಕರು, ವಿವಿಧ ವಾರ್ಡ್‌ಗಳಲ್ಲಿ ವಿಶೇಷ ಅನುದಾನದ ಅಡಿ ತಲಾ 50 ಲಕ್ಷ ರೂ. ಸಮಾನವಾಗಿ ಹಂಚಿಕೆ ಮಾಡಿ ಅಭಿವೃದ್ಧಿ ಕಾರ್ಯಗಳನ್ನು ತ್ವರಿತಗತಿಯಲ್ಲಿ ನಡೆಸಲಾಗುತ್ತಿದೆ. ತುರ್ತು ಕಾಮಗಾರಿಗಳಿಗೆ ಆದ್ಯತೆ ನೀಡಿ ಕಾಮಗಾರಿ ನಡೆಸಲಾಗುತ್ತದೆ ಎಂದರು. ಇದೇ ಸಂದರ್ಭ ಚಿತ್ರಾಪುರ ಕಡಲ ತೀರದಲ್ಲಿ ಕಡಲ್ಕೊರೆತ ಆಗದಂತೆ ಶಾಶ್ವತ ಕಾಮಗಾರಿ ಕೈಗೊಳ್ಳಲು ಈಗಾಗಲೇ ಟೆಂಡರ್ ಕರೆಯಲಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಸ್ಥಳೀಯ ಮನಪಾ ಸದಸ್ಯೆ ಹಾಗೂ ಉಪಮೇಯರ್ ವೇದಾವತಿ ಮತ್ತಿತರರು ಪಾಲ್ಗೊಂಡಿದ್ದರು.