ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳನ್ನು ರಾಜಕೀಯವಾಗಿ ಬಳಸಬೇಕೆಂದು ಬಿಜೆಪಿ ಯಾವತ್ತೂ ಯೋಚನೆ ಮಾಡಿಲ್ಲ. ನಾವು ಹಿಂದೆಯೂ ರಾಜಕಾರಣಕ್ಕಾಗಿ ನಾರಾಯಣ ಗುರುಗಳನ್ನು ಬಳಸಿಲ್ಲ, ಮುಂದೆಯೂ ಬಳಸುವುದಿಲ್ಲ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಹೇಳಿದರು.
ದ.ಕ.ಜಿಲ್ಲೆಯ ನೂತನ ಉಸ್ತುವಾರಿ ಸಚಿವರಾಗಿ ಅಧಿಕಾರ ಸ್ವೀಕಾರ ಮಾಡಿದ ಬಳಿಕ ಮೊದಲ ಭೇಟಿಯಾಗಿ ಜಿಲ್ಲೆಗೆ ಆಗಮಿಸಿದ ಅವರು, ನಗರದ ಕುದ್ರೋಳಿ ದೇವಾಲಯಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದರು. ಬಳಿಕ ಮಾತನಾಡಿದ ಸುನಿಲ್ ಕುಮಾರ್, ಬ್ರಹ್ಮಶ್ರೀ ನಾರಾಯಣ ಗುರುಗಳ ಆದರ್ಶವನ್ನು ಸರ್ಕಾರದಲ್ಲಿ ಅನುಷ್ಠಾನ ಮಾಡಲು ಪ್ರಯತ್ನಿಸುತ್ತೇವೆ. ಕಾಂಗ್ರೆಸ್ ಇದನ್ನು ರಾಜಕಾರಣ ಮಾಡಬಹುದು. ನಾವು ಯೋಜನೆಗಳಲ್ಲಿ ಅನುಷ್ಠಾನಕ್ಕೆ ತರುವ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.
ಲೇಡಿಹಿಲ್ ವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣ ಗುರುಗಳ ವೃತ್ತವೆಂದು ಮರುನಾಮಕರಣ ಮಾಡಬೇಕೆನ್ನುವುದು ಬಿಜೆಪಿ ಸರ್ಕಾರದ ನಿರ್ಣಯ. ಕಾನೂನು ಬದ್ಧವಾಗಿ ಮಾಡಬೇಕೆನ್ನುವ ದೃಷ್ಟಿಯಿಂದ ಮಂಗಳೂರು ಮಹಾನಗರ ಪಾಲಿಕೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದೆ. ಈ ನಡುವೆ ಅಲ್ಲಿ ಯಾರಾದರೂ ನಾರಾಯಣ ಗುರು ವೃತ್ತವೆಂದು ಬೋರ್ಡ್ ಹಾಕುತ್ತಾರೆ ಎಂದರೆ ನಮ್ಮದೇನೂ ಆಕ್ಷೇಪವಿಲ್ಲ. ಅಧಿಕೃತ ಮರುನಾಮಕರಣವನ್ನು ಅತ್ಯಂತ ಶೀಘ್ರವಾಗಿ ಮಾಡುತ್ತೇವೆ ಎಂದು ಸಚಿವ ಸುನಿಲ್ ಕುಮಾರ್ ಹೇಳಿದರು.
ಗಣರಾಜ್ಯೋತ್ಸವ ಪರೇಡ್‍ನಲ್ಲಿನ ಸ್ತಬ್ಧಚಿತ್ರವನ್ನು ಕೇಂದ್ರದ ಉನ್ನತ ಸಮಿತಿಯೊಂದು ಬೇರೆ ಬೇರೆ ಆಯಾಮಗಳಲ್ಲಿ ಮಾಡಲು ಅವಕಾಶ ನೀಡುತ್ತದೆ. ಮುಂದಿನ ವರ್ಷದಲ್ಲಿ ಯಾವ ವಿಚಾರದಲ್ಲಿ ಸ್ತಬ್ಧಚಿತ್ರ ಕಳುಹಿಸಬೇಕು ಎನ್ನುವುದನ್ನು ಆ ಸಮಿತಿ ನಿರ್ಧರಿಸುತ್ತದೆ. ಇದು ಗೊತ್ತಿದ್ದರೂ ಕೇರಳದ ಕಮ್ಯುನಿಸ್ಟ್ ಸರ್ಕಾರ ಅದನ್ನು ರಾಜಕೀಯಗೊಳಿಸುತ್ತಿದೆ. ತಾನೇ ತಪ್ಪೆಸಗಿ ಅದಕ್ಕೆ ರಾಜಕೀಯ ತಿರುವು ಕೊಡುವ ಕಾರ್ಯ ಮಾಡಿದೆ ಎಂದರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ