ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯಕ್ಕೆ ಜಿಲ್ಲಾ ಉಸ್ತುವಾರಿ, ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಭೇಟಿ ನೀಡಿ ಇಲ್ಲಿ ನಡೆಯುತ್ತಿರುವ ಹಲವಾರು ಕೆಲಸಗಳ ಪ್ರಗತಿ ಪರಿಶೀಲನೆ ನಡೆಸಿದರು.
ನಿಧಾನ ಗತಿಯಲ್ಲಿ ಸಾಗುತ್ತಿರುವ ರಸ್ತೆ ಕಾಮಗಾರಿ ಪರಿಶೀಲನೆ ಹಾಗೂ ಅದಿಸುಬ್ರಹ್ಮಣ್ಯ ವಸತಿಗೃಹದ ಕಾಮಗಾರಿ ಪರಿಶೀಲನೆ ನಡೆಸಿದ ಸಚಿವರು, ಸಭೆಗೆ ಹಾಜರಾಗದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಅಂತಹ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ಅಪರ ಜಿಲ್ಲಾ ನಿರ್ದೇಶಕರಿಗೆ ಆದೇಶಿಸಿದರು. ಇನ್ನು ಸಭೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯದ ಅಭಿವೃದ್ಧಿ, ದೇವಸ್ಥಾನದ ಭದ್ರತೆ, ರಸ್ತೆ ಅಗಲೀಕರಣ, ಒಳಚರಂಡಿ ಕೊಳಚೆ ನೀರಿನ ವಿಷಯ ಕುರಿತು ಮಹತ್ವದ ಚರ್ಚೆಗಳು ನಡೆಸಲಾಯಿತು.
ಸಭೆಯಲ್ಲಿ ಸುಳ್ಯ ಶಾಸಕ ಎಸ್. ಅಂಗಾರ, ಅಪರ ಜಿಲ್ಲಾಧಿಕಾರಿ ರೂಪಾ, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಹಾಗೂ ದೇವಳದ ಸಿಬ್ಬಂದಿ, ಜನಪ್ರತಿನಿಧಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.