ಮಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಅವರದ್ದು ತಂತಿ ಮೇಲಿನ ನಡಿಗೆ ಎಂಬ ಸಿದ್ದರಾಮಯ್ಯನವರ ಹೇಳಿಕೆಗೆ ಸಚಿವ ಸಿಟಿ ರವಿ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿಯ 105 ಶಾಸಕರದ್ದು ತಂತಿ ಮೇಲಿನ ನಡಿಗೆ ಎಂದು ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪೂರ್ಣ ಬಹುಮತ ಬಂದಿಲ್ಲ. 17 ಶಾಸಕರು ರಾಜೀನಾಮೆ ಕೊಟ್ಟ ಕಾರಣಕ್ಕೆ ತಾಂತ್ರಿಕ ಕಾರಣದಿಂದ ಈ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಇದರ ಜೊತೆ ಸಾರ್ವಜನಿಕ ಜೀವನವೇ ತಂತಿ ಮೇಲಿನ ನಡಿಗೆ. ಗುರಿ, ದಾರಿ ಬಗ್ಗೆ ಸ್ಪಷ್ಟತೆ ಇರಬೇಕು. ಗುರಿ ಮುಟ್ಟುವವನಿಗೆ ಏಕಾಗ್ರತೆ ಬೇಕು ಎಂದರು.
ಬಿಜೆಪಿ ಕೇಲವ ಅಧಿಕಾರಕ್ಕಾಗಿ ಬಂದಿಲ್ಲ. ದೇಶ ಮೊದಲು ಎಂಬ ತತ್ವದಲ್ಲಿ ನಮ್ಮ ಪಕ್ಷವನ್ನು ಹಿರಿಯರು ಕಟ್ಟಿದ್ದಾರೆ. ವ್ಯಕ್ತಿ, ಜಾತಿ, ಕುಟುಂಬ ಮೊದಲ್ಲಲ್ಲ. ಇಲ್ಲಿ ದೇಶವೇ ಮೊದಲು. ಈ ತತ್ವದ ಹಿನ್ನೆಲೆಯಲ್ಲಿ ಕೆಲಸ ಮಾಡಿದರೆ ಗುರಿ ತಪ್ಪಲು ಸಾಧ್ಯವಿಲ್ಲ. ಆ ಕಾರಣಕ್ಕೆ ಕೇವಲ ಮುಖ್ಯಮಂತ್ರಿ ಮಾತ್ರವಲ್ಲ, ನಾವು 105 ಶಾಸಕರಿಗೂ ತಂತಿ ಮೇಲಿನ ನಡಿಗೆಯಾಗಿದೆ ಎಂದರು.
ಅನರ್ಹ ಪ್ರಕರಣ ಕುರಿತು ಮಾತನಾಡಿ, ಅನರ್ಹರನ್ನು ಕಡೆಗಣಿಸಲಾಗುವುದಿಲ್ಲ. ಹಾಗಂತ ತಲೆ ಮೇಲೆ ಹೊರಲಾಗದು. ಅನರ್ಹ ಶಾಸಕರ ಬಗ್ಗೆ ಸುಪ್ರೀಂ ಕೋರ್ಟ್ ನೀಡುವ ತೀರ್ಪಿನ ಬಳಿಕ ಎಲ್ಲಾ ನಿರ್ಧಾರವಾಗುತ್ತದೆ. ಅವರಿಗೆ ಟಿಕೆಟ್ ನೀಡುವ ವಿಚಾರ ಪಾರ್ಲಿಮೆಂಟರಿ ಬೋರ್ಡ್ ನಿರ್ಧಾರ ತೆಗೆದುಕೊಳ್ಳುತ್ತದೆ. 105 ಬಿಜೆಪಿ ಶಾಸಕರು ಗೆದ್ದಿರುವುದರಿಂದ 17 ಅನರ್ಹ ಶಾಸಕರ ತ್ಯಾಗ ಅಧಿಕಾರಕ್ಕೆ ಬರಲು ಸಾಧ್ಯವಾಗಿದೆ. 105 ಜನರನ್ನು ಕಡೆಗಣಿಸಿ 17 ಜನರನ್ನು ತಲೆಮೇಲೆ ಹೊರಲಾಗದು. 105 ಜನರನ್ನು ಪರಿಗಣಿಸಿ 17 ಜನರಿಗೆ ಗೌರವ ನೀಡಬೇಕಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಪ್ರವಾಹ ಸಂತ್ರಸ್ತರಿಗೆ ಕೇಂದ್ರ ಸರ್ಕಾರ ನೆರವು ನೀಡದ ಬಗ್ಗೆ ಪ್ರತಿಕ್ರಿಯಿಸಿ, ದೇಶದ 10 ರಾಜ್ಯಗಳಲ್ಲಿ ಪ್ರವಾಹ ತಲೆದೋರಿದೆ. ಒಂದು ರಾಜ್ಯಕ್ಕೆ ಕೊಟ್ಟು ಒಂದು ರಾಜ್ಯಕ್ಕೆ ಕೊಡಲಿಲ್ಲ ಎಂದರೆ ತಾರತಮ್ಯ ಎನ್ನಬಹುದು. ಯಾರಿಗೂ ಕೊಡಲಿಲ್ಲ, ಕೊಡುವಾಗ ನಮಗೂ ಕೊಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.