ಮಂಗಳೂರು: ಐತಿಹಾಸಿಕ ತಪ್ಪನ್ನು ಸರಿಪಡಿಸಲು ಕೇಂದ್ರ ಸರ್ಕಾರ ಸಿಎಎ ಮಸೂದೆಯನ್ನು ಜಾರಿಗೊಳಿಸಿದೆ. ಆದರೆ ಈ ಕಾಯ್ದೆಯ ಬಗ್ಗೆ ಬಹುದೊಡ್ಡ ಅಪಪ್ರಚಾರ ಮಾಡಲಾಗುತ್ತಿದೆ. ಆದರೆ ಸಿಎಎ ಮಸೂದೆಯಿಂದ ಭಾರತದ ಮುಸ್ಲಿಮರಿಗೆ ಯಾವುದೇ ಧಕ್ಕೆ ಇಲ್ಲ ಎಂದು ಮಂಗಳೂರಿನಲ್ಲಿ ವಿಹಿಂಪ ಕೇಂದ್ರೀಯ ಕಾರ್ಯದರ್ಶಿ ಮಿಲಿಂದ್ ಪರಾಂಡೆ ಹೇಳಿದರು.
ಮಂಗಳೂರಿನ ಸಂಘ ನಿಕೇತನದಲ್ಲಿ ಐದು ದಿನಗಳ ವಿಹಿಂಪ ರಾಷ್ಟ್ರೀಯ ಬೈಠಕ್ನಲ್ಲಿ ಚರ್ಚೆಯಾಗುತ್ತಿರುವ ವಿಷಯಗಳ ಬಗ್ಗೆ ಮಾತನಾಡಿದ ಅವರು, ಸಿಎಎ ಮಸೂದೆ ಪಾಕಿಸ್ತಾನ, ಬಾಂಗ್ಲಾ ಹಾಗೂ ಅಫ್ಘಾನಿಸ್ತಾನದ ಅಲ್ಪಸಂಖ್ಯಾತರ ವಿಚಾರದಲ್ಲಷ್ಟೇ ಇದೆ ವಿನಾ ಭಾರತೀಯ ಮುಸ್ಲಿಮರಿಗೆ ಇದರಿಂದ ಯಾವ ತೊಂದರೆಯೂ ಇಲ್ಲ. ಆದ್ದರಿಂದ ಈ ಅಪಪ್ರಚಾರಗಳಿಗೆ ಉತ್ತರ ನೀಡಲು ವಿಶ್ವ ಹಿಂದು ಪರಿಷತ್ ಈ ರಾಷ್ಟ್ರೀಯ ಬೈಠಕ್ನಲ್ಲಿ ಸಿಎಎಗೆ ಸಂಬಂಧಿಸಿ ಬಹಳಷ್ಟು ಚಿಂತಕರಿಂದ, ತಿಳಿದವರಿಂದ ಚರ್ಚೆ ನಡೆಸುತ್ತಿದೆ ಎಂದು ಹೇಳಿದರು.
ರಾಮ ಮಂದಿರ ನಿರ್ಮಾಣದ ವಿಚಾರದಲ್ಲಿ ಈ ಬೈಠಕ್ನಲ್ಲಿ ಸಾಕಷ್ಟು ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ನಡೆಯುತ್ತಿದ್ದು, ಸುಪ್ರೀಂ ಕೋರ್ಟ್ ರಾಮ ಮಂದಿರ ನಿರ್ಮಾಣ ಮಾಡಲು ಕೇಂದ್ರ ಸರ್ಕಾರಕ್ಕೆ ಟ್ರಸ್ಟ್ ರಚಿಸಲು ಸೂಚಿಸಿದೆ. ಆದರೆ ರಾಮ ಮಂದಿರವು ಸರ್ಕಾರದಿಂದ ನಿರ್ಮಾಣವಾಗಬಾರದು. ಜನಸಾಮಾನ್ಯರ, ಆಸ್ತಿಕರ ಹಣದಿಂದ ನಿರ್ಮಾಣವಾಗಬೇಕೆಂಬುದು ನಮ್ಮ ಸಂಕಲ್ಪ. ಈ ನಮ್ಮ ಬೇಡಿಕೆಯನ್ನು ಸರ್ಕಾರ ಪೂರ್ಣಗೊಳಿಸುವ ನಂಬಿಕೆ ಇದೆ ಎಂದು ಮಿಲಿಂದ್ ಪರಾಂಡೆ ಹೇಳಿದರು.