ಮಂಗಳೂರು: ಕರಾವಳಿ ಜಿಲ್ಲೆಗಳ ಮೂರು ಬ್ಯಾಂಕ್ ಗಳಾದ ಸಿಂಡಿಕೇಟ್ , ಕೆನರಾ ಮತ್ತು ಕಾರ್ಪೋರೇಷನ್ ಬ್ಯಾಂಕ್ ಗಳು ವಿಲೀನಗೊಳಿಸುತ್ತಿರುವ ಬಗ್ಗೆ ಸಿಂಡಿಕೇಟ್ ಬ್ಯಾಂಕ್ ನೌಕರರ ಸಂಘದ ಮಾಜಿ ರಾಜ್ಯಾಧ್ಯಕ್ಷ ಹೆಚ್.ವಿ ರಾವ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿ, ಬ್ಯಾಂಕ್ ವಿಲೀನ ಪ್ರಕ್ರಿಯೆ ಸುದ್ದಿ ನೋವು ತಂದಿದೆ. ವಿಲೀನ ಹೊಸತೇನಲ್ಲ. ಹಿಂದಿನಿಂದಲೂ ಇಂತಹ ಪ್ರಕ್ರಿಯೆ ನಡೆಯುತ್ತಿದೆ. ಆದರೆ ದೇಶ ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ಸಂದರ್ಭದಲ್ಲಿ ಈ ರೀತಿ ಮಾಡುತ್ತಿದ್ದಾರೆ. ಈ ಹಿಂದೆ ಸ್ಟೇಟ್ ಬ್ಯಾಂಕ್ ಜೊತೆಗೆ ಕೆಲವು ಬ್ಯಾಂಕ್ ಗಳು ವಿಲೀನವಾದಾಗ ಆದ ಅನಾಹುತಗಳು ನೋಡಿದ್ದೇವೆ. ಇದನ್ನೆಲ್ಲ ಬದಿಗಿಟ್ಟು ಹೊಸ ಧೋರಣೆಯನ್ನು ಸರಕಾರ ಅನುಸರಿಸುತ್ತಿದೆ. ಇದರಿಂದ ಯಾವುದೇ ಬ್ಯಾಂಕ್ ಗಳಿಗೆ ಲಾಭವಿಲ್ಲ. ಎನ್.ಪಿ.ಎ ಕೂಡ ಕಡಿಮೆ ಆಗುವುದಿಲ್ಲ ಎಂದರು.
ಬ್ಯಾಂಕ್ ನ ಎಲ್ಲಾ ಯೂನಿಯನ್ ಗಳು ಇದನ್ನು ಬಹಳ ಹಿಂದಿನಿಂದಲೇ ವಿರೋಧಿಸುತ್ತಿವೆ. ಆದರೆ ಸಕಾರಣ ನೀಡದೆ ಬ್ಯಾಂಕ್ ವಿಲೀನ ಮಾಡುತ್ತಿದ್ದಾರೆ. ಇದು ವಿಶ್ವ ಬ್ಯಾಂಕ್ ಅಣತಿಯಂತೆ ನಡೆಯುತ್ತಿದೆ. ಇದರ ಹಿಂದೆ ಸಾಮ್ರಾಜ್ಯ ಶಾಹಿಗಳ ಪಿತೂರಿ ಅಡಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.