ಮಂಗಳೂರು : ಬೇರೆ ದೇಶಗಳಲ್ಲಿ ಹೆಣ್ಣು ಮಕ್ಕಳಿಗೆ ಗೌರವವಿಲ್ಲದ ಕಾಲದಲ್ಲಿಯೂ ಭಾರತದಲ್ಲಿ ತಾಯಿಯಂತೆ ಕಾಣುತ್ತಿದ್ದರು. ಆದರೆ ಮೊಘಲರ ಕಾಲದ ಬಳಿಕ ಅತ್ಯಾಚಾರ ಕೃತ್ಯಗಳು ಅಧಿಕವಾಗುತ್ತಿವೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಮಾತೃಶಕ್ತಿ ಪ್ರಮುಖ್ ಆಶಾ ಜಗದೀಶ್ ಹೇಳಿದರು.
ಪಶು ವೈದ್ಯೆ ಅತ್ಯಾಚಾರ ಹಾಗೂ ಕೊಲೆಯನ್ನು ಖಂಡಿಸಿ ದುರ್ಗಾವಾಹಿನಿ ದ.ಕ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ನಡೆಸಿರುವ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ಸಡಿಲವಾದ ಕಾನೂನೇ ಅತ್ಯಾಚಾರ ಕೃತ್ಯಗಳು ಹೆಚ್ಚಲು ಮೂಲ ಕಾರಣ ಎಂದರು.
ಅತ್ಯಾಚಾರಿಗಳನ್ನೇ ಇಂದು ಸಂಸತ್ ಸದಸ್ಯರಾಗಿ ಮತದಾರರು ಆಯ್ಕೆ ಮಾಡುತ್ತಿದ್ದಾರೆ ಆದ್ದರಿಂದಲೇ ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ ಕಡಿಮೆಯಾಗುತ್ತಿಲ್ಲ, ಅಂತವರು ಯಾವ ಕಾನೂನು ತರಲು ಸಾಧ್ಯ..? ಯಾವುದೇ ಪಕ್ಷದವರಾದವರೂ ಸರಿ ಅತ್ಯಾಚಾರಿಗಳೆಂದು ಸಂಶಯವಿದ್ದರೂ ಅಂತವರಿಗೆ ಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶ ನೀಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೆಣ್ಣು ಮಕ್ಕಳಿಗೆ ರಕ್ಷಣೆ ನೀಡಲು ಹಲವಾರು ಕಾನೂನು ಜಾರಿಗೆ ಬಂದಿವೆ, ಆದರೆ ಅದ್ಯಾವುದೂ ಇಂದು ಉಪಯೋಗವಾಗುತ್ತಿಲ್ಲ, ಕಠಿಣ ಕಾನೂನು ಖಂಡಿತಾ ಜಾರಿಯಾಗಬೇಕು, ಒಂದು ಸಲ ಅತ್ಯಾಚಾರಿ ಎಂದು ಸಾಬೀತಾದರೆ ಅವನಿಗೆ ಗಲ್ಲು ಶಿಕ್ಷೆ ವಿಧಿಸಬೇಕು, ಇಲ್ಲದಿದ್ದಲ್ಲಿ ಕತ್ತಲೆ ಕೋಣೆಯಲ್ಲಿ ಕೂಡಿ ಹಾಕಬೇಕು, ಎಂದು ಅತ್ಯಾಚಾರಿಗಳ ವಿರುದ್ದ ಆಕ್ರೋಶ ಹೊರ ಹಾಕಿದರು.