ಸುಬ್ರಹ್ಮಣ್ಯ (ದಕ್ಷಿಣ ಕನ್ನಡ): ಕರ್ನಾಟಕ ಸರಕಾರದ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿರುವ ನಾಗಾರಾಧನೆಯ ಪುಣ್ಯತಾಣ, ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸುಪ್ರಸಿದ್ಧ ಮಹತೋಭಾರ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಾರ್ಚ್ 12ರಂದು ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದೆ. ದೇವಾಲಯದಲ್ಲಿ ಜನಸಾಮಾನ್ಯರ ಅನುಕೂಲಕ್ಕಾಗಿ ಸಪ್ತಪದಿ ಸಾಮೂಹಿಕ ಸರಳ ವಿವಾಹ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ವಿವಾಹವಾಗಲು ಬಯಸುವವರು ದೇವಳದ ಕಚೇರಿಯಿಂದ ಅರ್ಜಿ ಫಾರಂ ಪಡೆದು ಸಲ್ಲಿಸಬಹುದು. 08257-281224, 236200, 281700, 281265 ಕರೆ ಮಾಡಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು. ದೇವಳದ ಕಚೇರಿ ವೇಳೆಯಲ್ಲಿ ಖುದ್ದಾಗಿ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.
ಮಾರ್ಚ್ 12ರಂದು ಬೆಳಗ್ಗೆ 11.30 ರಿಂದ 12.00 ರವರೆಗೆ ನೆರವೇರುವ ವೃಷಭ ಲಗ್ನ ಶುಭ ಮುಹೂರ್ತದಲ್ಲಿ ವಿವಾಹ ನೆರವೇರಲಿದೆ. ವಧು-ವರರು ನಿಗದಿತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಲು ಫೆಬ್ರವರಿ 15 ಕೊನೆಯ
ದಿನಾಂಕವಾಗಿದೆ. ಫೆಬ್ರವರಿ 20ರಂದು ನೋಂದಾಯಿತ ವಧು-ವರರ ವಿವರಗಳನ್ನು ದೇವಳದಲ್ಲಿ ಪ್ರಕಟಿಸಲಾಗುವುದು. ಫೆಬ್ರವರಿ 28 ರಂದು ಅಕ್ಷೇಪಣೆ ಸಲ್ಲಿಸಲು ಕೊನೆಯ ದಿನಾಂಕವಾದರೆ, ಮಾರ್ಚ್ 3 ರಂದು ವಧು-ವರರ ಅಂತಿಮ ಪಟ್ಟಿ ಪ್ರಕಟಿಸಲಾಗುವುದು ಎಂದು ಮಾಹಿತಿ ನೀಡಲಾಗಿದೆ.
ಅಗತ್ಯ ದಾಖಲೆಗಳ ವಿವರ: ವಧು-ವರರು ತಮ್ಮ ಪೂರ್ಣ ವಿಳಾಸದೊಂದಿಗೆ ಜನನ ದಿನಾಂಕವನ್ನು ದೃಢೀಕರಿಸುವ ಶಾಲಾ ದೃಢಪತ್ರ ಪ್ರತಿ, ಪಾಸ್‌ಪೋರ್ಟ್ ಸೈಜ್‌ನ 2 ಪೋಟೋ, ಆಧಾರ್ ಕಾರ್ಡ್, ರೇಷನ್ ಕಾರ್ಡ್, ವಧು-ವರರ ಬ್ಯಾಂಕ್ ಖಾತೆ ಸಂಖ್ಯೆಯ ದಾಖಲೆ ಪ್ರತಿ, ಅವಿವಾಹಿತರು ಎಂಬುದಾಗಿ ಪಂಚಾಯತ್‌ನಿಂದ ಅಥವಾ ಸಂಬಂಧಪಟ್ಟ ಸರಕಾರಿ ಇಲಾಖಾಧಿಕಾರಿಗಳಿಂದ ದೃಢಪತ್ರವನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು. ಸರಳ ಸಾಮೂಹಿಕ ವಿವಾಹವಾಗುವ ವರನಿಗೆ ಹೂವಿನ ಹಾರ, ಪಂಚೆ, ಶರ್ಟ್, ಶಲ್ಯ, ಪೇಟ, ಬಾಸಿಂಗ್ ಇತ್ಯಾದಿಗಳಿಗಾಗಿ ದೇವಳದಿಂದ ಪ್ರೋತ್ಸಾಹ ಧನವಾಗಿ 5 ಸಾವಿರ ರೂ ಹಾಗೂ ವಧುವಿಗೆ ಹೂವಿನ ಹಾರ, ಧಾರೆ ಸೀರೆ, ರವಿಕೆ ಕಣ, ಕಾಲುಂಗುರ ಇತ್ಯಾದಿಗಳಿಗೆ ರೂ.10 ಸಾವಿರ ನೀಡಲಾಗುವುದು. ಸುಮಾರು 40 ಸಾವಿರ ರೂ ಮೌಲ್ಯದಲ್ಲಿ ವಧುವಿಗೆ ಚಿನ್ನದ ತಾಳಿ, ಎರಡು ಚಿನ್ನದ ಗುಂಡನ್ನು ದೇವಾಲಯದಿಂದ ನೀಡಲಾಗುತ್ತದೆ.
ವಿವಾಹಕ್ಕೆ ಆಗಮಿಸುವ ವಧು-ವರರು, ಬಂಧು ಬಳಗ ಮತ್ತು ಸಾರ್ವಜನಿಕರಿಗೆ ಊಟೋಪಚಾರ ಹಾಗೂ ಅವಶ್ಯಕ ವ್ಯವಸ್ಥೆಗಳನ್ನು ದೇವಳದಿಂದ ಮಾಡಲಾಗುವುದು. ಸರಳ ಸಾಮೂಹಿಕ ವಿವಾಹವಾಗುವ ವಧುವಿಗೆ ಕಂದಾಯ ಇಲಾಖೆಯ ವತಿಯಿಂದ ಆದರ್ಶ ವಿವಾಹ ಯೋಜನೆಯಡಿ 10 ಸಾವಿರ ರೂ ನಿಶ್ಚಿತ ಠೇವಣಿ ಸೌಲಭ್ಯವನ್ನು ಒದಗಿಸಲಾಗುವುದು. ವಿವಾಹವಾಗುವ ಪರಿಶಿಷ್ಠ ಜಾತಿಯ ಜೋಡಿಗೆ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಸರಳ ವಿವಾಹ ಯೋಜನೆಯಡಿ 50 ರೂ ಸಾವಿರಗಳನ್ನು ಒದಗಿಸಲಾಗುವುದು ಎಂದು ದೇಗುಲದ ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ: ಘಾಟಿ ಸುಬ್ರಹ್ಮಣ್ಯ ದೇವಾಲಯದಲ್ಲಿ ಹುಂಡಿ ಎಣಿಕೆ: 85 ಲಕ್ಷ ರೂ ಸಂಗ್ರಹ