ಬಂಟ್ವಾಳ: ಮಾಜಿ ಸಚಿವ ರಮಾನಾಥ್ ರೈ ಅವರ ನೇತೃತ್ವದಲ್ಲಿ ಬಂಟ್ವಾಳ ಮತ್ತು ಪಾಣೆ ಮಂಗಳೂರು ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಪುರಸಭೆ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ ಅವರಿಗೆ ಮನವಿ ಸಲ್ಲಿಸಿದರು.
ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾದ ಸದಸ್ಯರ ವಾರ್ಡ್ನಲ್ಲಿ ಅಭಿವೃದ್ಧಿ ಕಡೆಗಣನೆ, ಚುನಾಯಿತ ಜನ ಪ್ರತಿನಿಧಿಗಳಿಗೆ ಅಧಿಕಾರವಿಲ್ಲದೆ ಇರುವುದು, ನಿರ್ಮಲ ಬಂಟ್ವಾಳ ಯೋಜನೆಯಡಿ ತ್ಯಾಜ್ಯ ನಿರ್ವಹಣೆ ಸಂಪೂರ್ಣ ಸ್ಥಗಿತಗೊಂಡಿರುವುದು, ಕುಡಿಯುವ ನೀರು ಒದಗಿಸಲು ವಿಫಲವಾಗಿದೆ ಎಂದು ಪ್ರಸ್ತಾಪಿಸಿದರು.
ನೀರಿನ ಬಿಲ್ಲಿನಲ್ಲಿ ಏರಿಕೆಯಾಗಿದ್ದು, ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ. 2 ತಿಂಗಳು ನೀರಿನ ಬಿಲ್ಲು 90 ರೂ. ಇದ್ದು ಪುರಸಭೆಯ ಅವ್ಯವಸ್ಥೆಯಿಂದ 2 ತಿಂಗಳ ಕುಡಿಯುವ ನೀರಿನ ಬಿಲ್ಲು ಇದೀಗ 2 ಸಾವಿರದಿಂದ 3 ಸಾವಿರಕ್ಕೆ ಏರಿಕೆಯಾಗಿದೆ ಎಂದು ಆರೋಪಿಸಿದರು.
ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್, ಪಾಣೆ ಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುದೀಪ್ ಕುಮಾರ್ ಶೆಟ್ಟಿ, ಜಿಲ್ಲಾ ಪಂಚಾಯತ್ ಸದ್ಯಸರಾದ ಚಂದ್ರಪ್ರಕಾಶ್ ಶೆಟ್ಟಿ, ಎಂ. ಎಸ್. ಮಹಮ್ಮದ್ ಉಪಸ್ಥಿತರಿದ್ದರು.