ಮಂಗಳೂರು: ಕದ್ರಿ (ಮಂಗಳೂರು ಪೂರ್ವ) ಠಾಣೆಯಲ್ಲಿ ಮಾದಕ ದ್ರವ್ಯಪೀಡಿತೆ ಎಂಬ ಶೀರ್ಷಿಕೆಯಲ್ಲಿ ಯುವತಿಯೊಬ್ಬಳ ವಿಡಿಯೋ ವೈರಲ್ ಆಗುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ಸೃಷ್ಟೀಕರಣ ನೀಡಿದ್ದು, ಈ ಯುವತಿ ಮಾದಕವ್ಯಸನಿಯಲ್ಲ ಎಂದು ತಿಳಿಸಿದರು.
ಸೆಪ್ಟೆಂಬರ್ 1, 2023ರಂದು ಬೆಳಿಗ್ಗೆ 6:50ರ ಸುಮಾರಿಗೆ ಪಂಪ್ವೆಲ್ನಲ್ಲಿರುವ ಗಣೇಶ ಮೆಡಿಕಲ್ನಲ್ಲಿ ಯುವತಿಯೋರ್ವಳು ಆಕ್ರಮಣಕಾರಿಯಾದ ರೀತಿಯಲ್ಲಿ ವರ್ತಿಸುತ್ತಿದ್ದಳು. ಈ ಬಗ್ಗೆ ಅಬಕಾರಿ ಇಲಾಖೆಯ ಅಧಿಕಾರಿಗಳು ಮಾದಕ ದ್ರವ್ಯ ಸೇವನೆ ಮಾಡಿರಬಹುದೆಂದು ಯುವತಿಯನ್ನು ವೈದ್ಯಕೀಯ ತಪಾಸಣೆಗೆ ಕರೆದುಕೊಂಡು ಹೋಗಲು ಪ್ರಯತ್ನಿಸಿದ್ದರು. ಆಗ ಅಬಕಾರಿ ಇಲಾಖೆಯ ಅಧಿಕಾರಿಗಳ ಮೇಲೆ ಆಕ್ರಮಣಕಾರಿ ವರ್ತನೆ ತೋರಿದ್ದಳು. ಇದರಿಂದಾಗಿ ಯುವತಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲು ಇಲಾಖಾ ವಾಹನದಲ್ಲಿಮಂಗಳೂರು ಪೂರ್ವ (ಕದ್ರಿ) ಪೊಲೀಸ್ ಠಾಣೆಗೆ ಕರೆ ತಂದಿದ್ದರು. ಈ ವೇಳೆ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯೊಂದಿಗೂ ನಿಯಂತ್ರಣ ಮೀರಿ ವರ್ತಿಸಿದ್ದಳು. ಬಳಿಕ ಅಗತ್ಯ ಮಹಿಳಾ ಸಿಬ್ಬಂದಿ ಬಲದೊಂದಿಗೆ ಅಬಕಾರಿ ಇಲಾಖೆಯ ಅಧಿಕಾರಿಗಳು ಇಲಾಖೆ ವಾಹನದಲ್ಲಿ ವೈದ್ಯಕೀಯ ತಪಾಸಣೆಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿದ್ದು, ಆಕೆ ಮಾದಕ ದ್ರವ್ಯ ಸೇವನೆ ಮಾಡಿರುವ ಬಗ್ಗೆ ಪೂರಕ ಫಲಿತಾಂಶ ಬಂದಿಲ್ಲ. ನಂತರ ಯುವತಿಯನ್ನು ಪೋಷಕರ ವಶಕ್ಕೆ ವಹಿಸಲಾಗಿದೆ. ಉದ್ರೇಕಕಾರಿ ವರ್ತನೆ ಹಿನ್ನೆಲೆಯಲ್ಲಿ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ತನಿಖೆ ಮುಂದುವರೆದಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸರಣಿ ಅಪಘಾತ.. ಸಂಪೂರ್ಣ ನಜ್ಜುಗುಜ್ಜಾದ ಕಾರು.. ಅದೃಷ್ಟವಶಾತ್ ಪಾರಾದ ಚಾಲಕ: CCTV Video
ಸರಣಿ ಅಪಘಾತದಲ್ಲಿ ಕಾರು ಅಪ್ಪಚ್ಚಿ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66ರ ಜಪ್ಪಿನಮೊಗರುವಿನಲ್ಲಿ ಶನಿವಾರ ನಡೆದ ಸರಣಿ ಅಪಘಾತದಲ್ಲಿ ಕಾರು ಅಪ್ಪಚ್ಚಿಯಾಗಿತ್ತು. ಪವಾಡ ಸದೃಶ ರೀತಿಯಲ್ಲಿ ಕಾರಿನ ಚಾಲಕ ಬದುಕುಳಿದಿದ್ದ. ಅಪಘಾತದ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಮಿನಿ ಲಾರಿ, ಕಾರು, ಬಸ್ ನಡುವೆ ಈ ಸರಣಿ ಅಪಘಾತ ನಡೆದಿತ್ತು. ಲಾರಿ ಹಾಗೂ ಬಸ್ ನಡುವೆ ಸಿಕ್ಕು ಕಾರು ನುಜ್ಜುಗುಜ್ಜಾಗಿತ್ತು. ಕಾರಿನಲ್ಲಿ ಸಿಕ್ಕಿಕೊಂಡಿದ್ದ ಚಾಲಕನನ್ನು ಸ್ಥಳೀಯರು ಹರಸಾಹಸ ಪಟ್ಟು ಹೊರತೆಗೆದು ಆಸ್ಪತ್ರೆಗೆ ದಾಖಲಿಸಿದ್ದರು. ಅಪಘಾತದಲ್ಲಿ ತಲಪಾಡಿ ನಿವಾಸಿ ಮಂಗಳೂರಿನ ಎಂಸಿಎಫ್ ಉದ್ಯೋಗಿಯಾಗಿರುವ ಚಾಲಕ ದಿನೇಶ್ ಗಂಭೀರವಾಗಿ ಗಾಯಗೊಂಡಿದ್ದರು. ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಲಪಾಡಿಯಿಂದ ಮಂಗಳೂರಿಗೆ ತೆರಳುತ್ತಿದ್ದ ಮಿನಿ ಲಾರಿಯೊಂದು ಕಾರಿಗೆ ಡಿಕ್ಕಿ ಹೊಡೆದು ನಿಂತಿತ್ತು. ಈ ವೇಳೆ ಲಾರಿ ಹಿಂದೆ ಚಲಿಸುತ್ತಿದ್ದ ಕಾರು ಚಾಲಕ ಏಕಾಏಕಿ ಬ್ರೇಕ್ ಹಾಕಿದ್ದರಿಂದ ಹಿಂದಿನಿಂದ ವೇಗವಾಗಿ ಬರುತ್ತಿದ್ದ ಕೇರಳ ಸರ್ಕಾರಿ ಸಾರಿಗೆ ಬಸ್ ಬಲವಾಗಿ ಡಿಕ್ಕಿ ಹೊಡೆದಿತ್ತು. ಪರಿಣಾಮ ಬಸ್ - ಕಾರಿನ ಮಧ್ಯೆ ಕಾರು ಅಪ್ಪಚ್ಚಿಯಾಗಿತ್ತು.