ಮಂಗಳೂರು: ನಗರದಲ್ಲಿ ನಡೆದ ನಾಗನಕಲ್ಲು ಧ್ವಂಸ ಪ್ರಕರಣವನ್ನು 24 ದಿನಗಳೊಳಗೆ ಭೇದಿಸಿದಲ್ಲಿ ಪೊಲೀಸರಿಗೆ ಚಿನ್ನದ ಪದಕ ಪ್ರದಾನ ಮಾಡುವುದಾಗಿ ಗುರುಪುರ ವಜ್ರದೇಹಿ ರಾಜಶೇಖರಾನಂದ ಸ್ವಾಮೀಜಿ ಘೋಷಿಸಿದ್ದರು. ಆದರೆ ಶ್ರೀಗಳ ಕೊಡುಗೆಯನ್ನು ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್. ನಯವಾಗಿಯೇ ತಿರಸ್ಕರಿಸಿದ್ದಾರೆ.
ಇತ್ತೀಚೆಗೆ ನಗರದಲ್ಲಿ ಎರಡು, ಮೂರು ಕಡೆಗಳಲ್ಲಿ ಸರಣಿಯಂತೆ ನಾಗಬನದ ಕಲ್ಲುಗಳನ್ನು ಧ್ವಂಸಗೈಯುವ, ಎಸೆಯುವ ಪ್ರಕರಣಗಳು ನಡೆದಿದ್ದವು. ಈ ಹಿನ್ನೆಲೆಯಲ್ಲಿ ಕೋಡಿಕಲ್ನಲ್ಲಿ ನಡೆದಿರುವ ಪ್ರತಿಭಟನೆಯಲ್ಲಿ ಸ್ವಾಮೀಜಿ ಈ ಪ್ರಕರಣವನ್ನು 24 ದಿನಗಳಲ್ಲಿ ಬಗೆಹರಿಸಿದಲ್ಲಿ ಬಂಗಾರದ ಪದಕ ನೀಡಿ ಸಾರ್ವಜನಿಕವಾಗಿ ಪೊಲೀಸರಿಗೆ ಅಭಿನಂದನೆ ಸಲ್ಲಿಸಲಾಗುತ್ತದೆ ಎಂದು ಹೇಳಿದ್ದರು.
ಇದನ್ನೂ ಓದಿ: ನಾಗಬನ ಧ್ವಂಸ ಪ್ರಕರಣ : 8 ಮಂದಿ ಆರೋಪಿಗಳನ್ನ ಬಂಧಿಸಿದ ಮಂಗಳೂರು ಪೊಲೀಸರು
ಇದೀಗ ಪೊಲೀಸರು 24 ದಿನಗಳೊಳಗೆ ಈ ಪ್ರಕರಣವನ್ನು ಬಗೆಹರಿಸಿದ್ದು ಈ ಬಗ್ಗೆ ಸುದ್ದಿಗಾರರು ಕೇಳಿರುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪೊಲೀಸ್ ಆಯುಕ್ತ ಶಶಿಕುಮಾರ್ ಎನ್., ಸ್ವಾಮೀಜಿಯವರ ಪ್ರೋತ್ಸಾಹಕ್ಕೆ ನಾವು ಧನ್ಯವಾದ ಸಲ್ಲಿಸುತ್ತೇನೆ. ಆದರೆ ಅವರ ಬಂಗಾರದ ಪದಕದ ಕೊಡುಗೆಯ ಅಗತ್ಯ ನಮಗಿಲ್ಲ ಎಂದರು.
ಪೊಲೀಸ್ ತಂಡದ ಪರಿಶ್ರಮಕ್ಕೆ ನಾನು 20 ಸಾವಿರ ರೂ. ಬಹುಮಾನ ನೀಡಿದ್ದೇನೆ. ಪೊಲೀಸರ ಉತ್ತಮ ಕಾರ್ಯವನ್ನು ಗುರುತಿಸಲು ಇಲಾಖೆಯಲ್ಲಿ ಸಾಕಷ್ಟು ಮಾರ್ಗಗಳಿವೆ. ಸಿಎಂ, ರಾಷ್ಟ್ರಪತಿ ಪದಕಗಳನ್ನು ಗಳಿಸಲು ಅವಕಾಶಗಳಿವೆ. ಅದಕ್ಕೂ ಮೀರಿ ಅವರು ಬಂಗಾರದ ಪದಕ ಕೊಡುವುದಾಗಿ ಹೇಳಿದರೆ ನಾವು ಸ್ಪಂದಿಸಲು ಸಾಧ್ಯವಿಲ್ಲ. ಅವರು ಕೊಟ್ಟರೂ ಅದನ್ನು ಪಡೆದುಕೊಳ್ಳಲು ನಮಗೆ ಅವಕಾಶವಿಲ್ಲ. ವೈಯಕ್ತಿಕವಾಗಿ ಯಾರೇ ಸಾರ್ವಜನಿಕರು ನಗದು ಬಹುಮಾನ, ಬಂಗಾರದ ಪದಕ ಅಥವಾ ಇತರೆ ಬಹುಮಾನ ನೀಡಿದರೂ ಸ್ವೀಕರಿಸುವಂತಿಲ್ಲ. ಅಲ್ಲದೆ ಅದನ್ನು ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ ಎಂದು ಸ್ಪಷ್ಟಪಡಿಸಿದರು.