ಮಂಗಳೂರು: ನಗರದ ವ್ಯಕ್ತಿಯೊಬ್ಬನ ಫೇಸ್‌ಬುಕ್ ಖಾತೆ ಹ್ಯಾಕ್ ಮಾಡಿ ಅದರಲ್ಲಿ ಸೌದಿ ರಾಜನ ಬಗ್ಗೆ ಅವಹೇಳನಕಾರಿ ಕಮೆಂಟ್ ಬರೆದ ಪರಿಣಾಮ ಆತ ಸೌದಿ ಜೈಲಿನಲ್ಲಿ ಬಂಧಿಯಾಗಿದ್ದಾನೆ. ಮಂಗಳೂರಿನ ಬಿಕರ್ನಕಟ್ಟೆ ನಿವಾಸಿ ಶೈಲೇಶ್ ಕೊಟ್ಟಾರಿ ಕಿಡಿಗೇಡಿಗಳ ಕೃತ್ಯದಿಂದ ಸೌದಿ ಜೈಲಿನಲ್ಲಿ ಸಂಕಷ್ಟ ಅನುಭವಿಸುತ್ತಿರುವ ವ್ಯಕ್ತಿ.
ಕೇಂದ್ರ ಸರ್ಕಾರ ರೂಪಿಸಿದ ಸಿಎಎ ಮತ್ತು ಎನ್ಆರ್ಸಿ ಕಾಯ್ದೆ ಬೆಂಬಲಿಸಿ 2019ರಲ್ಲಿ ಸೌದಿ ಅರೇಬಿಯಾದಲ್ಲಿ ಶೈಲೇಶ್ ಫೇಸ್‌ಬುಕ್ ಪೋಸ್ಟ್ ಹಾಕಿದ್ದರು. ಜತೆಗೆ ಸಾಮಾಜಿಕ ಜಾಲತಾಣದಲಿದ್ದ ಮಂಗಳೂರಿನ ಘಟನೆಯ ವಿಡಿಯೋವೊಂದನ್ನು ಶೈಲೇಶ್ ಕೊಟ್ಟಾರಿ ತನ್ನ ಫೇಸ್ಬುಕ್ನಲ್ಲಿ ಶೇರ್ ಮಾಡಿದ್ದರು. ಇದರ ಬಳಿಕ ಅವರಿಗೆ ಜೀವ ಬೆದರಿಕೆ ಬಂದಿತ್ತು. ಇದರಿಂದ ಬೇಸತ್ತ ಶೈಲೇಶ್ ಕೊಟ್ಟಾರಿ ಫೇಸ್‌ಬುಕ್ ನಿಂದ ಅ ವಿಡಿಯೋವನ್ನು ಡಿಲೀಟ್ ಮಾಡಿದ್ದರು. ಆ ಬಳಿಕ 2019ರ ಫೆ.15ಕ್ಕೆ ಅವರು ತಮ್ಮ ಖಾತೆ ಸ್ತಂಭನಗೊಳಿಸಿದ್ದರು. ಬಳಿಕ ಫೆ.17ರಂದು ಕಿಡಿಗೇಡಿಗಳು ಶೈಲೇಶ್ ಕೊಟ್ಟಾರಿ ಅವರ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದು ಅದರಲ್ಲಿ ಸೌದಿ ರಾಜನ ಬಗ್ಗೆ ಅವಹೇಳನಕಾರಿಯಾಗಿ ಕಮೆಂಟ್ ಹಾಕಿದ್ದರು. ಈ ಪೋಸ್ಟ್ ಶೈಲೇಶ್ ಅವರಿಗೆ ಸಂಕಷ್ಟವನ್ನು ತಂದಿಟ್ಟಿತ್ತು.
ಫೇಸ್‌ಬುಕ್ ಖಾತೆ ಹ್ಯಾಕ್ ಮಾಡಿ ಸಂದೇಶ ಹಾಕಿರುವುದು ಬರುತ್ತಿದ್ದಂತೆ ತಾನು ಕೆಲಸ ಮಾಡುವ ಕಂಪನಿಯ ಗಮನಕ್ಕೆ ಶೈಲೇಶ್ ಅವರು ತಂದು, ಫೆ.20ರಂದು ಸೌದಿ ಪೊಲೀಸ್ ಠಾಣೆಗೆ ದೂರು ನೀಡಲು ತೆರಳಿದ್ದರು. ಈ ವೇಳೆ ಸೌದಿ ಪೊಲೀಸರು ವಿಚಾರಣೆ ನೆಪದಲ್ಲಿ ವಶಕ್ಕೆ ಪಡೆದು ಜೈಲಿಗೆ ತಳ್ಳಿದ್ದರು. ಬಂಧಿಯಾದ 6 ತಿಂಗಳ ಬಳಿಕ ಜೈಲಿನಿಂದ ತನ್ನ ಪತ್ನಿ ಕವಿತಾ ಅವರಿಗೆ ಫೋನ್ ಮಾಡಿ ತಾನು ಬಂಧನಕ್ಕೊಳಗಾದ ವಿಷಯ ತಿಳಿಸಿದರು. ಫೇಸ್‌ಬುಕ್ ಹ್ಯಾಕ್ನಿಂದ ಈ ರೀತಿ ತೊಂದರೆಯಾಗಿರುವ ಬಗ್ಗೆ ಸೌದಿ ನ್ಯಾಯಾಲಯಕ್ಕೆ ಮನದಟ್ಟು ಮಾಡಲು ಯಾರೂ ಮುಂದೆ ಬರಲಿಲ್ಲ ಎಂದು ಪತ್ನಿಗೆ ತಿಳಿಸಿದ್ದರು.
ಎಷ್ಟೇ ಪ್ರಯತ್ನಪಟ್ಟರೂ ಶೈಲೇಶ್ ಕೊಟ್ಟಾರಿ ಬಿಡುಗಡೆಯಾಗದಿರುವ ಬಗ್ಗೆ ನೊಂದ ಕುಟುಂಬಸ್ಥರು ಮಂಗಳೂರು ನಗರ ಸೈಬರ್ ಪೊಲೀಸ್ ಠಾಣೆಯಲ್ಲಿ ಫೇಸ್‌ಬುಕ್ ಖಾತೆ ಹ್ಯಾಕ್ ಆಗಿರುವ ಬಗ್ಗೆ ದೂರು ನೀಡಿದ್ದರು. ಇದರ ತನಿಖೆ ಆರಂಭಿಸಿದ ಸೈಬರ್ ಠಾಣೆ ಪೊಲೀಸರು ಫೇಸ್‌ಬುಕ್ ಸಂಸ್ಥೆಗೆ ಪತ್ರ ಬರೆದು ಈ ಬಗ್ಗೆ ಸೂಕ್ತ ದಾಖಲೆ ಕೇಳಿದ್ದಾರೆ. ಆದರೆ ಫೇಸ್‌ಬುಕ್ ನಿಂದ ಪ್ರತಿಕ್ರಿಯೆ ಬಾರದ ಹಿನ್ನೆಲೆ ಕುಟುಂಬದವರು ರಾಜ್ಯ ಹೈಕೋರ್ಟ್ ಮೆಟ್ಟಿಲೇರಿದ್ದರು.
ಹೈಕೋರ್ಟ್ ಎಚ್ಚರಿಕೆ: ಶೈಲೇಶ್ ಖಾತೆ ಹ್ಯಾಕ್ ಬಗ್ಗೆ ಫೇಸ್‌ಬುಕ್ ದಾಖಲೆ ನೀಡದಿರುವ ಬಗ್ಗೆ ಹೈಕೋರ್ಟ್ ಏಕಸದಸ್ಯ ಪೀಠದ ನ್ಯಾಯಮೂರ್ತಿ ಕೃಷ್ಣಎಸ್. ದೀಕ್ಷಿತ್ ಅವರ ಮುಂದೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದಾಗ ನ್ಯಾಯಮೂರ್ತಿ ದೀಕ್ಷಿತ್ 'ಭಾರತದಲ್ಲೇ ಫೇಸ್ ಬುಕ್ ಕಾರ್ಯಾಚರಣೆ ಬಂದ್ ಮಾಡಿಸಬೇಕಾಗುತ್ತದೆ' ಎಂದು ಎಚ್ಚರಿಕೆ ನೀಡಿದ್ದಾರೆ. ಫೇಸ್‌ಬುಕ್ ಒಂದು ವಾರದೊಳಗೆ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು. ಭಾರತೀಯ ಪ್ರಜೆಯು ಸುಳ್ಳು ಪ್ರಕರಣದಲ್ಲಿ ವಿದೇಶಿ ನೆಲದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಹಿನ್ನೆಲೆ ಆತನ ಬಿಡುಗಡೆಗೆ ಯಾವೆಲ್ಲ ಕ್ರಮ ಕೈಗೊಂಡಿದೆ ಎಂಬ ಬಗ್ಗೆ ಕೇಂದ್ರ ಸರ್ಕಾರ ಮಾಹಿತಿ ನೀಡಬೇಕು ಎಂದು ನಿರ್ದೇಶನ ನೀಡಿರುವ ನ್ಯಾಯಾಲಯ ವಿಚಾರಣೆಯನ್ನು ಜೂ.22ಕ್ಕೆ ಮುಂದೂಡಿದೆ.
ಬಿಡುಗಡೆ ಪ್ರಯತ್ನದಲ್ಲಿ ನಿರಾಸಕ್ತಿ: "ನನ್ನ ಗಂಡನ ವಿಚಾರದಲ್ಲಿ ವಾಸ್ತವತೆ ಅರಿತು ಸೌದಿ ಕೋರ್ಟ್, ಕೇಂದ್ರ ಸರ್ಕಾರ, ನಮ್ಮ ನ್ಯಾಯಾಲಯ, ಅಧಿಕಾರಿಗಳು ಹಾಗೂ ಜನಪ್ರತಿನಿಗಳು ನೆರವು ನೀಡಬೇಕು. ಇಬ್ಬರು ಮಕ್ಕಳೊಂದಿಗೆ ನಿತ್ಯ ಕಣ್ಣೀರಲ್ಲೇ ಬದುಕುತ್ತಿರುವ ನಾನು ಶೈಲೇಶ್ ಅವರು ಶೀಘ್ರ ಬಿಡುಗಡೆಯಾಗಲಿ ಎಂದು ನಿರೀಕ್ಷಿಸುತ್ತಿದ್ದೇನೆ. ಅವರ ಬಂಧನವಾದ ಹಲವು ತಿಂಗಳ ಬಳಿಕ ಸೌದಿಯಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿ ವಾಸ್ತವ ತೆರೆದಿಟ್ಟರೂ ರಾಯಭಾರ ಕಚೇರಿ ಅಧಿಕಾರಿಗಳು ಬಿಡುಗಡೆ ಪ್ರಯತ್ನದಲ್ಲಿ ನಿರಾಸಕ್ತಿಯನ್ನು ತೋರಿದ್ದಾರೆ. ಬಿಡುಗಡೆಗೆ ಸಂಬಂಧಿಸಿ ಸೌದಿ ಆಡಳಿತಕ್ಕೆ ಒತ್ತಡ ಹಾಕುವಂತೆ ಸಂಸದ ನಳಿನ್ ಕುಮಾರ್ ಕಟೀಲ್, ಸದಾನಂದ ಗೌಡ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಸುಬ್ರಹ್ಮಣ್ಯಂ ಜೈಶಂಕರ್ ಅವರನ್ನು ಸೇರಿದಂತೆ ನಾನಾ ನಾಯಕರನ್ನು ಭೇಟಿ ಮಾಡಿ ಮನವಿ ಮಾಡಲಾಗಿತ್ತು. ಆದರೆ ಅವರಿಂದ ಏನೂ ಪ್ರಯೋಜನವಾಗಿಲ್ಲ" ಕವಿತಾ, ಶೈಲೇಶ್ ಪತ್ನಿ.