ಮಂಗಳೂರು: ಜೀವನದ ಮಹತ್ವದ ಘಟ್ಟಗಳಲ್ಲಿ ಮದುವೆಯೂ ಒಂದು. ಈ ದಿನವನ್ನು ಅವಿಸ್ಮರಣೀಯ ವಾಗಿಸಬೇಕೆನ್ನುವುದೇ ಎಲ್ಲರ ಕನಸು. ಅದಕ್ಕಾಗಿ ಮದುವೆಯ ಕಾರ್ಯಕ್ರಮಗಳನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಆದರೆ ಇಲ್ಲೊಬ್ಬರು ಪೊಲೀಸ್ ತಮ್ಮ ಮದುವೆಯನ್ನು ರಕ್ತದಾನ, ನೇತ್ರದಾನ ಹಾಗೂ ಮದುವೆಯ ಸಂಪ್ರದಾಯಗಳ ಆಧ್ಯಾತ್ಮಿಕ, ವೈಜ್ಞಾನಿಕ ಹಿನ್ನೆಲೆಗಳ ಬಗ್ಗೆ ಜಾಗೃತಿ ಮೂಡಿಸುವಂತಹ ಆಮಂತ್ರಣ ಪತ್ರಿ ಸಿದ್ಧಪಡಿಸಿ ಗಮನ ಸೆಳೆದಿದ್ದಾರೆ.
ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜಿಪ ಗ್ರಾಮದವರಾದ ಶಾಂತಪ್ಪ ಅವರು ಮಂಗಳೂರಿನಲ್ಲಿ ಟ್ರಾಫಿಕ್ ಪೊಲೀಸ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಧುನಿಕ ಜಗತ್ತಿನಲ್ಲಿ ಮದುವೆ ತನ್ನ ಅರ್ಥ ಕಳೆದುಕೊಳ್ಳುತ್ತಿದೆ ಎಂಬ ನಿಟ್ಟಿನಲ್ಲಿ ಇವರು ವಿಶಿಷ್ಟವಾದ ಮದುವೆ ಆಮಂತ್ರಣ ಪತ್ರಿಕೆ ಸಿದ್ಧಪಡಿಸಿದ್ದಾರೆ. ಇದರಲ್ಲಿ ಮದುವೆಯ ಹಿಂದಿರುವ ಸಂಪ್ರದಾಯದ ಹಿನ್ನೆಲೆಯನ್ನು ವಿವರವಾಗಿ ಹೇಳಿದ್ದಾರೆ. ಕರಿಮಣಿ, ಮೆಹಂದಿ, ಕಾಲುಂಗುರ, ಕನ್ಯಾದಾನ, ಅಕ್ಷತೆ ಇವುಗಳ ಮಹತ್ವಗಳ ಬಗ್ಗೆ ವೈಜ್ಞಾನಿಕ ಹಾಗೂ ಆಧ್ಯಾತ್ಮಿಕ ಹಿನ್ನೆಲೆಯಲ್ಲಿ ತಿಳಿಸಿದ್ದಾರೆ. ಮುಖ್ಯವಾಗಿ ನೇತ್ರದಾನ ಹಾಗೂ ರಕ್ತದಾನಗಳ ಬಗೆಗೆ ಜಾಗೃತಿ ಮೂಡಿಸುವ ಪ್ರಯತ್ನವನ್ನು ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿದ ಶಾಂತಪ್ಪ ಅವರು, ಮೊದಲಿನಿಂದಲೂ ನನಗೆ ಶಿಕ್ಷಕನಾಗಬೇಕೆಂಬ ಕನಸು ಇತ್ತು. ಆದರೆ ಆ ಕನಸು ಈಡೇರಲಿಲ್ಲ. ಬಳಿಕ ನಾನು ಪೊಲೀಸ್ ಇಲಾಖೆಗೆ ಸೇರಿಕೊಂಡೆ. ಆದರೆ ಶಿಕ್ಷಕಿಯನ್ನೇ ವಿವಾಹವಾಗಬೇಕೆಂದು ಕನಸು ಕಾಣುತ್ತಿದ್ದೆ. ಈ ಕಾರಣಕ್ಕಾಗಿಯೇ ಈಗ ನಾನು ಶಿಕ್ಷಕಿಯೋರ್ವರನ್ನೇ ವಿವಾಹವಾಗುತ್ತಿದ್ದೇನೆ. ಹಾಗಾಗಿ ನಾನು ಕಂಡ ಕನಸು ಕೈಗೂಡಿದೆ ಎಂದು ಹೇಳಿದರು.
ಅದೇ ರೀತಿ ನನ್ನ ವಿವಾಹ ಆಮಂತ್ರಣ ಪತ್ರಿಕೆ ವಿಶಿಷ್ಟವಾಗಿ ರಬೇಕೆಂದು ಕನಸು ಕಾಣುತ್ತಿದೆ. ಹಿಂದೆ ನಮ್ಮ ಪೊಲೀಸ್ ಇಲಾಖೆಯ ಸಹೋದ್ಯೋಗಿಯೊಬ್ಬರು ಮದುವೆಯಾಗುವಾಗ ರಕ್ತದಾನ, ನೇತ್ರದಾನ ಹಾಗೂ ಮದುವೆಯ ರೀತಿ ರಿವಾಜುಗಳ ಬಗ್ಗೆ ಆಮಂತ್ರಣ ಪತ್ರಿಕೆಯಲ್ಲಿ ಬರುವಂತೆ ವಿಶಿಷ್ಟವಾಗಿ ಜಾಗೃತಿ ಮೂಡಿಸಿದ್ದರು. ಈ ಹಿನ್ನೆಲೆಯಲ್ಲಿ ನಾನೂ ನನ್ನ ಆಮಂತ್ರಣ ಪತ್ರಿಕೆಯನ್ನು ವಿಶಿಷ್ಟವಾಗಿಸಲು ಬಯಸಿದ್ದೆ. ಸಾಹಿತಿಗಳಿಂದ, ತಿಳಿದವರಿಂದ, ಗುರುಹಿರಿಯರಿಂದ ನಾನು ಈ ಮಾಹಿತಿಗಳನ್ನು ಪಡೆದು ಆಮಂತ್ರಣ ಪತ್ರಿಕೆ ಸಿದ್ಧಪಡಿಸಿದ್ದೇನೆ ಎಂದರು.