ಮಂಗಳೂರು: ಡ್ರಗ್ಸ್ ಫ್ರಿ ಮಂಗಳೂರು ಮಾಡುವ ನಿಟ್ಟಿನಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಮಂಗಳೂರು ಸಿಸಿಬಿ ಪೊಲೀಸರು ಮಾದಕ ವಸ್ತು ಎಂಡಿಎಂಎ ಮಾರಾಟ, ಸಾಗಾಟ ಜಾಲದಲ್ಲಿನ ಪ್ರಮುಖ ಡ್ರಗ್ಸ್ ಪೆಡ್ಲರ್ ನೈಜೀರಿಯಾ ಮಹಿಳೆಯೋರ್ವಳನ್ನು ಬಂಧಿಸಿದ್ದಾರೆ. ಬೆಂಗಳೂರಿನ ಯಲಹಂಕದಲ್ಲಿ ವಾಸವಿದ್ದ ನೈಜೀರಿಯಾದ ಒಂಡೋ ರಾಜ್ಯದ ಅಡೆವೊಲೆ ಅಡೆಟುಟು ಆನು ಯಾನೆ ಆಯಿಶಾ(33) ಬಂಧಿತ ಆರೋಪಿಯಾಗಿದ್ದಾಳೆ.
ಸಿಸಿಬಿ ಪೊಲೀಸರು ಇತ್ತೀಚೆಗೆ ಮಂಗಳೂರು ನಗರದಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಪ್ರಮುಖ ಡ್ರಗ್ಸ್ ಪೆಡ್ಲರ್ಗಳನ್ನು ಬಂಧಿಸಿ, ಲಕ್ಷಾಂತರ ಮೌಲ್ಯದ ಮಾದಕ ವಸ್ತು ವಶಪಡಿಸಿಕೊಂಡಿದ್ದರು. ಈ ಡ್ರಗ್ಸ್ ದಂಧೆಯ ಕಿಂಗ್ ಪಿನ್ ಪತ್ತೆಗೆ ತನಿಖೆ ಕೈಗೊಂಡಿದ್ದರು. ಆಗ ಆರೋಪಿಗಳಿಗೆ ಮಾದಕ ವಸ್ತುಗಳನ್ನು ಬೆಂಗಳೂರಿನಲ್ಲಿ ವಾಸವಿದ್ದ ನೈಜೀರಿಯಾ ಮಹಿಳೆ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಅದರಂತೆ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ ಮಹಿಳೆಯನ್ನು ಬಂಧಿಸಿದ್ದಾರೆ.
ಮಹಿಳೆಯನ್ನು ಬೆಂಗಳೂರಿನಲ್ಲಿ ವಶಕ್ಕೆ ಪಡೆದು, ಆಕೆ ಬಳಿ ಇದ್ದ ಒಟ್ಟು 400 ಗ್ರಾಂ ತೂಕದ 20 ಲಕ್ಷ ರೂ. ಮೌಲ್ಯದ ಎಂಡಿಎಂಎ ಮಾದಕ ವಸ್ತು, 1 ಐಫೋನ್, 2,910 ರೂ. ನಗದು ಹಣ ವಶಪಡಿಸಿಕೊಳ್ಳಲಾಗಿದೆ. ಜಪ್ತಿ ಮಾಡಿದ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ 20,52,910 ರೂ. ಎಂದು ಪೊಲೀಸರು ತಿಳಿಸಿದ್ದಾರೆ.
ನೈಜೇರಿಯಾ ಪ್ರಜೆಯಾದ ಮಹಿಳೆಯು ವ್ಯಾಸಂಗ ವೀಸಾದಡಿ ಭಾರತಕ್ಕೆ ಬಂದು ವಿದ್ಯಾಭ್ಯಾಸ ಮಾಡಿಕೊಂಡು, ಬಳಿಕ ಇಲ್ಲಿಯೇ ಸ್ವಲ್ಪ ಸಮಯ ನರ್ಸಿಂಗ್ ಕೆಲಸ ಮಾಡಿಕೊಂಡಿದ್ದಳು. ಆನಂತರ ನರ್ಸಿಂಗ್ ಕೆಲಸ ಬಿಟ್ಟು ಮಾದಕ ವಸ್ತುಗಳ ಮಾರಾಟ ದಂಧೆ ನಡೆಸುತ್ತಿದ್ದಳು. ಈಕೆಯ ವಿರುದ್ಧ ಪ್ರಸ್ತುತ ಮಂಗಳೂರು ನಗರದ ಉಳ್ಳಾಲ, ಸಿಇಎನ್ ಪೊಲೀಸ್ ಠಾಣೆ, ಮಂಗಳೂರು ಉತ್ತರ, ಕಂಕನಾಡಿ ನಗರ, ಕೊಣಾಜೆ ಹಾಗೂ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಈ 7 ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳು ಈಕೆಯಿಂದಲೇ ಮಾದಕ ವಸ್ತು ಖರೀದಿಸಿದ್ದರು. ಆರೋಪಿತೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಮಾದಕ ವಸ್ತು ಮಾರಾಟ ಜಾಲದ ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಎಸಿಪಿ ಪಿ ಎ ಹೆಗಡೆ, ಪೊಲೀಸ್ ನಿರೀಕ್ಷಕರಾದ ಶ್ಯಾಮ್ ಸುಂದರ್ ಹೆಚ್ ಎಂ, ಪಿಎಸ್ಐಗಳಾದ ರಾಜೇಂದ್ರ ಬಿ, ಶರಣಪ್ಪ ಭಂಡಾರಿ, ಸುದೀಪ್ ಎಂ ವಿ, ನರೇಂದ್ರ ಹಾಗೂ ಸಿಸಿಬಿ ಸಿಬ್ಬಂದಿ ಪಾಲ್ಗೊಂಡಿದ್ದರು.
ಇದನ್ನೂ ಓದಿ: ವಾಟ್ಸ್‌ಆ್ಯಪ್‌ನಲ್ಲಿ ಗ್ರಾಹಕರನ್ನು ಸಂಪರ್ಕಿಸಿ ಡ್ರಗ್ಸ್ ದಂಧೆ: ಬೆಂಗಳೂರಿನಲ್ಲಿ ಇಬ್ಬರು ನೈಜೀರಿಯಾ ಪ್ರಜೆಗಳ ಬಂಧನ