ಮಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಕಳೆದ ವರ್ಷದ ಡಿ.19ರಂದು ನಗರದಲ್ಲಿ ನಡೆದಿದ್ದ ಹಿಂಸಾಚಾರದಲ್ಲಿ ಭಾಗಿಯಾಗಿದ್ದಾರೆಂದು ಹೇಳಲಾಗುತ್ತಿರುವ ಕೇರಳ ಹಾಗೂ ಕರ್ನಾಟಕ ಗಡಿಭಾಗವಾದ ಕಾಸರಗೋಡು ಸೇರಿದಂತೆ ಮತ್ತಿತರ ಊರುಗಳ ಹಲವಾರು ವಿದ್ಯಾರ್ಥಿಗಳು, ಕಾರ್ಮಿಕರು ಸೇರಿ ಮಹಿಳೆಯರಿಗೂ ಮಂಗಳೂರು ಪೊಲೀಸರು ನೋಟಿಸ್ ಜಾರಿಗೊಳಿಸಿದ್ದಾರೆ.
ಕೇರಳ ಹಾಗೂ ಕರ್ನಾಟಕ ಗಡಿಭಾಗ ಪ್ರದೇಶದಿಂದ ಮಂಗಳೂರಿಗೆ ಬಂದಿರುವ 650ಕ್ಕೂ ಅಧಿಕ ಮಂದಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ಭಾರತೀಯ ದಂಡ ಸಂಹಿತೆಯ ಪ್ರಕಾರ ಸೆಕ್ಷನ್ 143 (ಕಾನೂನುಬಾಹಿರ ಗುಂಪುಗೂಡುವಿಕೆ), 147 (ಗಲಭೆಯಲ್ಲಿ ಭಾಗಿ), 148 (ಅಕ್ರಮ ಆಯುಧ ಹೊಂದುವಿಕೆ), 188 (ನಿಷೇಧಾಜ್ಞೆ ಉಲ್ಲಂಘನೆ), 353 (ಹಲ್ಲೆ), 332 (ಕರ್ತವ್ಯಕ್ಕೆ ಅಡ್ಡಿ), 324 (ಹಿಂಸೆ), 427 (ಸಾರ್ವಜನಿಕ ಆಸ್ತಿ-ಪಾಸ್ತಿಗೆ ಹಾನಿ), 307 (ಕೊಲೆ ಯತ್ನ), 120 ಬಿ (ಪಿತೂರಿ) ಸಹಿತ ಹಲವು ಕಾಯ್ದೆಗಳನ್ನು ಉಲ್ಲೇಖಿಸಲಾಗಿದೆ.
ಈ ನೋಟಿಸ್ನ್ನು ಸ್ಪೀಡ್‌ಪೋಸ್ಟ್ ಮೂಲಕ ರವಾನಿಸಲಾಗಿದೆ ಎಂದು ಹೇಳಲಾಗ್ತಿದೆ. ಈ ನೋಟಿಸ್‌ನಲ್ಲಿ ಡಿ.19ರಂದು ತಾವು ಮಂಗಳೂರಿನಲ್ಲಿ ನಡೆಯಲಿಚ್ಛಿಸಿರುವ ಪ್ರತಿಭಟನೆಯಲ್ಲಿ ಭಾಗವಹಿಸಲು ಕಾನೂನು ಬಾಹಿರವಾಗಿ ಜಮಾಯಿಸಿದ್ದೀರಿ. ಅಲ್ಲದೆ ಗಲಭೆಯಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ದೊರೆತಿದೆ. ಈ ಹಿನ್ನೆಲೆಯಲ್ಲಿ ನಿಗದಿತ ದಿನಾಂಕದೊಳಗೆ ಮಂಗಳೂರಿನ ಬಂದರ್ ಠಾಣೆಗೆ ಹಾಜರಾಗಿ ವಿಚಾರಣೆಗೆ ಹಾಜರಾಗಬೇಕೆಂದು ಪೊಲೀಸರು ಜಾರಿಗೊಳಿಸಿದ ನೋಟಿಸ್‌ನಲ್ಲಿ ತಿಳಿಸಲಾಗಿದೆ.