ಮಂಗಳೂರು (ದಕ್ಷಿಣಕನ್ನಡ): ಮಂಗಳೂರಿನ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಕುಲಶೇಖರ್ ನಿವಾಸಿ ಪ್ರಾಣೇಶ್ ಬರೆದಿರುವ ತುಳು ಕವನ ವಿಶ್ವದಾಖಲೆ ಬರೆದಿದೆ. ಎರಡನೇ ವರ್ಷದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪ್ರಾಣೇಶ್ 'ತುಳುನಾಡ ಐಸಿರಿ' ಎಂಬ ಹೆಸರಿನ ಈ ಕವನ 21 ಅಡಿ ಉದ್ದವಿದೆ. ತುಳುಭಾಷೆ ಸಂಸ್ಕೃತಿಯನ್ನು ಬಿಂಬಿಸುವ ಈ ಕವನದಲ್ಲಿ 108 ಚರಣಗಳಿದೆ. 2241 ತುಳು ಶಬ್ದಗಳನ್ನು ಬಳಸಿ ರಚಿಸಲಾಗಿದೆ.
ಕವನ ಬರೆಯಲು 30 ಕ್ಕೂ ಅಧಿಕ ಎ4 ಹಾಳೆಯನ್ನು ಉಪಯೋಗಿಸಲಾಗಿದ್ದು, 432 ಸಾಲುಗಳನ್ನು ಹೊಂದಿದೆ. ಕವನದಲ್ಲಿ ತುಳುನಾಡಿನ ಸಂಸ್ಕೃತಿಯಾದ ದೈವರಾಧನೆ, ನಾಗಾರಾಧನೆ, ಪುಣ್ಯಕ್ಷೇತ್ರ, ತುಳುನಾಡ ಹಬ್ಬಗಳ ಆಚರಣೆ, ಜನಪ್ರಿಯ ಕ್ರೀಡೆ, ತುಳು ಭಾಷೆಯನ್ನು 8 ನೇ ಪರಿಚ್ಛೇದ ಕ್ಕೆ ಸೇರಿಸುವ ಮನವಿ ಸಾಹಿತ್ಯ ರೂಪದಲ್ಲಿ ಇದೆ. ಈಗಾಗಲೇ ಹಲವು ತುಳು ಹಾಡುಗಳನ್ನು ಬರೆದು ಗೌರವಕ್ಕೆ ಪಾತ್ರರಾಗಿದ್ದ ಪ್ರಾಣೇಶ್ ಗೆ ಇದೀಗ ವರ್ಲ್ಡ್ ಬುಕ್ ಅಫ್ ರೆಕಾರ್ಡ್ ನ ಗರಿಮೆ ಸಿಕ್ಕಿರುವುದು ಅವರ ಕುಟುಂಬದವರ ಸಂತಸಕ್ಕೆ ಕಾರಣವಾಗಿದೆ.
ಲಾಕ್ ಡೌನ್ ಸಂದರ್ಭದಲ್ಲಿ ಕಳುಹಿಸಲಾದ ಈ ಕವನ ವರ್ಲ್ಡ್ ಬುಕ್ ಅಫ್ ರೆಕಾರ್ಡ್ಸ್ ಗೆ ಆಯ್ಕೆಯಾದ ಬಗ್ಗೆ ಹಾಗೂ ಇಮೇಲ್ ಮೂಲಕ ಸರ್ಟಿಫಿಕೇಟ್ ಬಂದಿದೆ. ತುಳುವಿನಲ್ಲಿ ಅತಿ ಉದ್ದದ ಕವನ ಬರೆದಿರುವ ಪ್ರಾಣೇಶ್ ಸಾಧನೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.