ಮಂಗಳೂರು: ಪುತ್ತೂರು ತಾಲೂಕಿನ ದಲಿತ ಬಾಲಕಿಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಆರ್ಎಸ್ಎಸ್ ಮುಖಂಡ ನಾರಾಯಣ ರೈ ಎಂಬಾತನ ರಕ್ಷಿಸುವ ಪ್ರಯತ್ನವನ್ನು ಪೊಲೀಸ್ ಇಲಾಖೆ, ವೈದ್ಯಾಧಿಕಾರಿಗಳು, ಆಶಾಕಾರ್ಯಕರ್ತೆಯರು ಮಾಡುತ್ತಿದ್ದಾರೆ. ಆದ್ದರಿಂದ ತಕ್ಷಣ ಆರೋಪಿ ಬಂಧಿಸಿ ಸಮಗ್ರ ತನಿಖೆ ನಡೆಸಿ ಸಂತ್ರಸ್ತ ಬಾಲಕಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ ಆಗ್ರಹಿಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಸಂತ್ರಸ್ತ ಬಾಲಕಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ನೀಡಿರುವ ದೂರಿನಲ್ಲಿ ಬಲವಂತವಾಗಿ ತನ್ನ ಮೇಲೆ ಲೈಂಗಿಕ ಸಂಪರ್ಕ ಮಾಡಿ ಗರ್ಭವತಿಯಾಗಿ ಮಗುವಿನ ಜನ್ಮಕ್ಕೆ ನಾರಾಯಣ ರೈ ಎಂಬಾತನೇ ಕಾರಣ. ಆದರೆ, ಇದೀಗ ಆತನ ಬದಲಿಗೆ ಬೇರೆಯವನ್ನು ಈ ಪ್ರಕರಣದಲ್ಲಿ ಆರೋಪಿಗಳಾಗಿ ಮಾಡುವ ಪ್ರಯತ್ನ ನಡೆಯುತ್ತಿದೆ. ನಾರಾಯಣ ರೈ ಮೇಲೆ ಎಫ್ಐಆರ್ ದಾಖಲಾಗಿ ಒಂದು ತಿಂಗಳು ಕಳೆದರೂ ಇನ್ನೂ ಆತನ ಬಂಧನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆರೋಪಿ ರಕ್ಷಣೆ ಹಿಂದೆ ಕಾಣದ ಕೈಗಳು
ಆರೋಪಿಯನ್ನು ರಕ್ಷಿಸಲು ಕಾಣದ ಕೈಗಳು ಕೆಲಸ ಮಾಡುತ್ತಿವೆ. ಈ ಒತ್ತಡದ ಮೇಲೆಯೇ ಪೊಲೀಸ್ ಅಧಿಕಾರಿಗಳು, ವೈದ್ಯಾಧಿಕಾರಿಗಳು, ಆಶಾಕಾರ್ಯಕರ್ತರು ಪ್ರಕರಣವನ್ನು ಬೇರೆಡೆ ಬದಲಿಸುವ ಪ್ರಯತ್ನ ಮಾಡುತ್ತಿದ್ದಾರೆ. ಈ ಮೂಲಕ ಅವರುಗಳು ಕರ್ತವ್ಯ ಲೋಪ ಎಸಗಿದ್ದಾರೆ. ಜಿಲ್ಲೆಯ ಉಸ್ತುವಾರಿ ಸಚಿವರು ಈ ಬಗ್ಗೆ ನೈತಿಕ ಹೊಣೆಹೊತ್ತು ರಾಜಿನಾಮೆ ನೀಡಬೇಕು. ಜೊತೆಗೆ ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲು ಅವರು ಈ ಬಗ್ಗೆ ನ್ಯಾಯ ಕೊಡಿಸುವ ಪ್ರಯತ್ನ ಮಾಡಬೇಕು ಎಂದು ಹೇಳಿದರು.
ಬಾಲಕಿಗೆ ಬೆದರಿಕೆ
ತೋಟದ ಕೆಲಸಕ್ಕೆ ಹೋಗುತ್ತಿದ್ದ ಬಾಲಕಿಯ ಮೇಲೆ ಬಲವಂತವಾಗಿ ಅತ್ಯಾಚಾರ ಮಾಡಲಾಗಿತ್ತು. ಯಾರಿಗೂ ಹೇಳದಂತೆ ಬೆದರಿಕೆಯನ್ನು ಸಹ ಒಡ್ಡಲಾಗಿದೆ. ಈ ಸಂಬಂಧ ಸೆ.5ರಂದು ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಅದರಲ್ಲಿರುವ ಹೇಳಿಕೆ ತನ್ನದಲ್ಲ. ಅಲ್ಲದೆ ದೂರು ಪ್ರತಿಯಲ್ಲಿನ ತನ್ನ ಸಹಿಯನ್ನು ನಕಲಿ ಮಾಡಲಾಗಿದೆ. ಈ ನಡುವೆ ಪ್ರಕರಣದಲ್ಲಿ ಬಾಲಕಿಯ ಸಹೋದರ ಸಂಬಂಧಿ ಸಿಲುಕಿಸುವ ಪ್ರಯತ್ನ ಮಾಡಲಾಗುತ್ತಿದೆ. ಈ ಬಗ್ಗೆ ಆಕೆ ಮಾಜಿಸ್ಟ್ರೇಟ್ ಎದುರಿನಲ್ಲಿಯೂ ನಾರಾಯಣ ರೈಯೇ ಆರೋಪಿ ಎಂದು ಉಲ್ಲೇಖಿಸಿದ್ದಾಳೆ.
ಇದೀಗ ಆರೋಪಿ ನಾರಾಯಣ ರೈ ವಿರುದ್ಧ ಪ್ರಕರಣ ದಾಖಲಾಗಿದ್ದು, ಆತನ ಜಾಮೀನು ಅರ್ಜಿಯೂ ತಿರಸ್ಕಾರಗೊಂಡಿದೆ. ಆದ್ದರಿಂದ ತಕ್ಷಣ ನಾರಾಯಣ ರೈಯನ್ನು ಅತ್ಯಾಚಾರ, ದಲಿತ ದೌರ್ಜನ್ಯ, ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿ ಶೀಘ್ರವಾಗಿ ಬಂಧನಮಾಡಲಿ. ಆರೋಪಿಯ ಡಿಎನ್ಎ ಪರೀಕ್ಷೆಯಾಗಲಿ. ಅ.28ರೊಳಗೆ ಆರೋಪಿಯ ಬಂಧನವಾಗದಿದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಲುಕ್ಮಾನ್ ಬಂಟ್ವಾಳ ಆಗ್ರಹಿಸಿದರು.